Site icon Vistara News

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ‘ಮದುವೆ’ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Arvind Kejriwal

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಶತಾಯ ಗತಾಯ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ (India Bloc) ಆರಂಭದಿಂದಲೂ ಭಿನ್ನಮತ, ಭಿನ್ನಾಭಿಪ್ರಾಯ ತಲೆದೋರುತ್ತಿವೆ. ನಿತೀಶ್‌ ಕುಮಾರ್‌ (Nitish Kumar) ಇಂಡಿಯಾ ಒಕ್ಕೂಟ ತೊರೆದಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿದ್ದೇ ಇದಕ್ಕೆ ನಿದರ್ಶನಗಳಾಗಿವೆ. ಇದರ ಬೆನ್ನಲ್ಲೇ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (Arvind Kejriwal) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಕಾಂಗ್ರೆಸ್‌ ಜತೆಗಿನ ನಮ್ಮ ಮದುವೆಯು (ಆಪ್‌-ಕಾಂಗ್ರೆಸ್‌ ಮೈತ್ರಿ) (AAP Congress Alliance) ಶಾಶ್ವತ ಅಲ್ಲ” ಎಂದು ಹೇಳುವ ಮೂಲಕ ಮೈತ್ರಿ ಮುರಿದುಕೊಳ್ಳುವ ಸೂಚನೆ ನೀಡಿದ್ದಾರೆ.

ಇಂಡಿಯಾ ಟುಡೇ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅರವಿಂದ್‌ ಕೇಜ್ರಿವಾಲ್‌ ಅವರು ಹೀಗೆ ಹೇಳಿದ್ದಾರೆ. “ಕಾಂಗ್ರೆಸ್‌ ಜತೆ ನಾವೇನು ಕಾಯಂ ಮದುವೆ ಮಾಡಿಕೊಂಡಿಲ್ಲ. ಈಗ ಬಿಜೆಪಿಯನ್ನು ಸೋಲಿಸುವುದಷ್ಟೇ ನಮ್ಮ ಗುರಿಯಾಗಿದೆ. ಸರ್ವಾಧಿಕಾರ ಹಾಗೂ ಗೂಂಡಾಗಿರಿಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ನಾವು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ದೇಶವನ್ನು ಉಳಿಸುವುದು ನಮಗೆ ಮುಖ್ಯ ಉದ್ದೇಶವಾಗಿದೆ. ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಮಾತ್ರ ನಾವು ಮೈತ್ರಿ ಮಾಡಿಕೊಂಡಿದ್ದೇವೆ” ಎಂದು ಹೇಳಿರುವುದು ಭಾರಿ ಸಂಚಲನ ಮೂಡಿಸಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ

ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದಾಗಿ ಬಿಜೆಪಿ ಆಗ್ರಹಿಸುತ್ತಿದೆ. ಇದರ ಕುರಿತು ಪ್ರತಿಕ್ರಿಯಿಸಿದ ಅವರು, “ಬಿಜೆಪಿ ಹೇಳಿತು ಎಂದ ಮಾತ್ರಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ, ನಾನು ಜೈಲಿಗೆ ಹೋಗುತ್ತೇನೆ ಎಂಬುದು ಮುಖ್ಯ ವಿಷಯವಲ್ಲ. ದೇಶದ ಭವಿಷ್ಯದ ಬಗ್ಗೆ ನನಗೆ ಚಿಂತೆ ಇದೆ. ಅವರಿಗೆ ಎಷ್ಟು ದಿನ ಬೇಕೋ, ಅಷ್ಟು ದಿನ ನನ್ನನ್ನು ಜೈಲಿನಲ್ಲಿ ಇರಿಸಲಿ. ನಾವು ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ, ಹೋರಾಟ ನಿಲ್ಲಿಸಲ್ಲ” ಎಂದಿದ್ದಾರೆ. ಕೇಜ್ರಿವಾಲ್‌ ಅವರು ಜೂನ್‌ 2ರಂದು ಮತ್ತೆ ಜೈಲಿಗೆ ಹೋಗಲಿದ್ದಾರೆ.

ಇಂಡಿಯಾ ಒಕ್ಕೂಟದ ಸಭೆಗೆ ದೀದಿ ಗೈರು

ಲೋಕಸಭೆ ಚುನಾವಣೆ ಕೊನೆಯ ಹಂತಕ್ಕೆ ಬಂದು ನಿಂತಿದೆ. ಆರು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆ ಮುಗಿಯಲಿದೆ. ಇನ್ನು, ಕೊನೆಯ ಹಂತದ ಮತದಾನದ ದಿನವಾದ ಜೂನ್‌ 1ರಂದೇ ಇಂಡಿಯಾ ಒಕ್ಕೂಟದ ಪಕ್ಷಗಳ ಸಭೆ ನಡೆಯಲಿದೆ. ಆದರೆ, ಇಂಡಿಯಾ ಒಕ್ಕೂಟದ ಮಹತ್ವದ ಸಭೆಗೆ ಗೈರಾಗಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದು ಕೂಡ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Arvind Kejriwal: ಜಾಮೀನು ಅವಧಿ ವಿಸ್ತರಣೆಗೆ ಕೋರಿ ಅರ್ಜಿ; ಸುಪ್ರೀಂನಲ್ಲಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ-ಮತ್ತೆ ಜೈಲು ಫಿಕ್ಸ್‌!

Exit mobile version