Site icon Vistara News

Arvind Kejriwal: 6ನೇ ಬಾರಿಗೂ ಇ.ಡಿ ಸಮನ್ಸ್‌ಗೆ ಕ್ಯಾರೇ ಎನ್ನದ ಕೇಜ್ರಿವಾಲ್;‌ ಈ ಸಲ ಅರೆಸ್ಟ್?

Arvind Kejriwal

No protection from arrest to Arvind Kejriwal in liquor policy money laundering case, says Delhi HC

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ (Excise Policy Case) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಇ.ಡಿ ಅಧಿಕಾರಿಗಳು ನೀಡಿದ ಆರನೇ ಸಮನ್ಸ್‌ಗೂ (ED Summons) ಕ್ಯಾರೇ ಎಂದಿಲ್ಲ. ಆರನೇ ಸಮನ್ಸ್‌ ಅನ್ವಯ ಫೆಬ್ರವರಿ 19ರಂದು ಅರವಿಂದ್‌ ಕೇಜ್ರಿವಾಲ್‌ ಅವರು ಇ.ಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆರನೇ ಬಾರಿಯೂ ಕೇಜ್ರಿವಾಲ್‌ ಅವರು ವಿಚಾರಣೆಯನ್ನು ತಪ್ಪಿಸಿಕೊಂಡಿದ್ದಾರೆ. ಹಾಗಾಗಿ, ಈ ಬಾರಿ ಇ.ಡಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Arvind Kejriwal: ವಿಶ್ವಾಸಮತ ಗೆದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್; 54 ಎಎಪಿ ಶಾಸಕರ ಬೆಂಬಲ

‌ಅರವಿಂದ್‌ ಕೇಜ್ರಿವಾಲ್‌ ಅವರು ವಿಚಾರಣೆಗೆ ಹಾಜರಾಗದಿರುವ ಕುರಿತು ಆಮ್‌ ಆದ್ಮಿ ಪಕ್ಷವು ಪ್ರಕಟಣೆ ತಿಳಿಸಿದೆ. “ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಇ.ಡಿ ನೀಡಿದ ಸಮನ್ಸ್‌ ಕಾನೂನುಬಾಹಿರವಾಗಿದೆ. ಅಲ್ಲದೆ, ಪ್ರಕರಣವು ನ್ಯಾಯಾಲಯದಲ್ಲಿದೆ. ಇ.ಡಿ ಕೂಡ ಕೋರ್ಟ್‌ ಮೊರೆ ಹೋಗಿದೆ. ಪದೇಪದೆ ಸಮನ್ಸ್‌ ಜಾರಿಗೊಳಿಸುವ ಬದಲು ಇ.ಡಿ ಅಧಿಕಾರಿಗಳು ನ್ಯಾಯಾಲಯದ ಆದೇಶದವರೆಗೆ ಕಾಯಬೇಕು” ಎಂದು ತಿಳಿಸಿದೆ. ಪದೇಪದೆ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಅವರು ವಿಚಾರಣೆಗೆ ಹಾಜರಾಗದ ಕಾರಣ ಇ.ಡಿ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎಂಬ ಆರೋಪದಲ್ಲಿ ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗುತ್ತಿದೆ ನವೆಂಬರ್‌ 2 ಹಾಗೂ ನವೆಂಬರ್‌ 21ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್‌ ಜಾರಿಗೊಳಿಸಿತ್ತು. ಎರಡು ಬಾರಿಯೂ ಕೇಜ್ರಿವಾಲ್‌ ಅವರು ವಿಚಾರಣೆಗೆ ಗೈರಾದ ಕಾರಣ ಜನವರಿ 3ರಂದು ಹಾಜರಾಗುವಂತೆ ಮೂರನೇ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಮೂರನೇ ಬಾರಿಯೂ ಅವರ ವಿಚಾರಣೆಗೆ ಗೈರಾಗಿದ್ದರು. ಜನವರಿ 19 ಹಾಗೂ ಫೆಬ್ರವರಿ 2ರಂದು ನೀಡಿದ ಸಮನ್ಸ್‌ಗಳಿಗೂ ಅರವಿಂದ್‌ ಕೇಜ್ರಿವಾಲ್‌ ಕ್ಯಾರೇ ಎಂದಿರಲಿಲ್ಲ. ಈಗ ಫೆಬ್ರವರಿ 19ರ ವಿಚಾರಣೆಗೂ ಕೇಜ್ರಿವಾಲ್‌ ಹಾಜರಾಗಿಲ್ಲ.

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇಪದೆ ನಿರಾಕರಿಸುತ್ತಲೇ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version