Site icon Vistara News

Covid 19: ಒಂದೇ ದಿನ 1,300 ಕೊರೊನಾ ಕೇಸ್‌, ರಾಜ್ಯಗಳಿಗೆ ಪಂಚಸೂತ್ರ ನೀಡಿದ ಕೇಂದ್ರ

As Covid-19 cases surge, health ministry asks states to follow 5-fold strategy

As Covid-19 cases surge, health ministry asks states to follow 5-fold strategy

ನವದೆಹಲಿ: ದೇಶದಲ್ಲಿ ಕೊರೊನಾ (Covid 19) ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯವು ಐದು ಪ್ರಮುಖ ಸೂಚನೆ ನೀಡಿದೆ. ನಿತ್ಯ ಸೋಂಕಿತರ ಸಂಖ್ಯೆ ನಿತ್ಯವೂ ಜಾಸ್ತಿಯಾಗುತ್ತಿರುವ ಕಾರಣ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೊರೊನಾ ತಪಾಸಣೆ, ಪತ್ತೆ, ಚಿಕಿತ್ಸೆ, ಲಸಿಕೆ ವಿತರಣೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಸೋಂಕು ನಿಗ್ರಹಿಸುವಂತೆ ನಿರ್ದೇಶಿಸಿದೆ.

ಸೋಂಕು ನಿಗ್ರಹದ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ. ಸೋಂಕು ಹೆಚ್ಚಿರುವ ರಾಜ್ಯಗಳು ತಪಾಸಣೆ, ಲಸಿಕೆ ವಿತರಣೆ ಸೇರಿ ಹಲವು ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ, ಶೀಘ್ರದಲ್ಲಿಯೇ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಕ್‌ ಡ್ರಿಲ್‌ (ಕೊರೊನಾ ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ) ಮಾಡಬೇಕು. ಬೂಸ್ಟರ್‌ ಡೋಸ್‌ಗಳ ವಿತರಣೆಗೆ ವೇಗ ನೀಡಬೇಕು. ಎಚ್‌3ಎನ್‌2 ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು ಎಂದು ಸೂಚಿಸಿದೆ.

ಒಂದೇ ದಿನ 1,300 ಕೇಸ್‌

ದೇಶದಲ್ಲಿ ಗುರುವಾರವೂ ನಿತ್ಯ ಪ್ರಕರಣಗಳ ಸಂಖ್ಯೆ 1,300 ದಾಟಿದೆ. ಮಾರ್ಚ್‌ 23ರಂದು ದೇಶದಲ್ಲಿ 1,300 ಕೊರೊನಾ ಕೇಸ್‌ ಪತ್ತೆಯಾಗಿದ್ದು, ಇವು ಕಳೆದ 140 ದಿನಗಳಲ್ಲಿಯೇ ದಾಖಲಾದ ಗರಿಷ್ಠ ಕೇಸ್‌ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 7,605ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕರ್ನಾಟಕದಲ್ಲಿ ಒಬ್ಬರು ಸೇರಿ ಮೂವರ ಮೃತಪಟ್ಟಿದ್ದಾರೆ. ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮೋದಿ ಸಭೆಯಲ್ಲಿ ಹೇಳಿದ್ದೇನು?

ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ್ದ ಮೋದಿ, ಹಲವು ಸೂಚನೆ ನೀಡಿದ್ದರು. “ದೇಶದಲ್ಲಿ ಕೊರೊನಾ ನಿಗ್ರಹಿಸುವ ದಿಸೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಲ್ಯಾಬ್‌ ತಪಾಸಣೆಗಳನ್ನು ಹೆಚ್ಚಿಸಬೇಕು. ಕೊರೊನಾ ಪಾಸಿಟಿವ್‌ ಬಂದವರ ಮಾದರಿಯನ್ನು ಕಡ್ಡಾಯವಾಗಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು, ಹೊಸ ತಳಿಗಳು ಅಥವಾ ಉಪ ತಳಿಗಳ ಹರಡುವಿಕೆ ಮೇಲೂ ನಿಗಾ ಇಡಬೇಕು. ಮೇಲಾಗಿ ಇವುಗಳನ್ನು ಪತ್ತೆ ಹಚ್ಚಬೇಕು. ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ ರಾಜ್ಯಗಳಲ್ಲಿ ತಪಾಸಣೆ ಹೆಚ್ಚಿಸುವ ಕುರಿತು ಕ್ರಮ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು” ಎಂದು ಹೇಳಿದ್ದರು.

ಹಾಗೆಯೇ, ಎಚ್‌3ಎನ್‌2 ಸೋಂಕಿನ ಮೇಲೆಯೂ ನಿಗಾ ಇಡಬೇಕು. ಕೊರೊನಾ ಹಾಗೂ ಎಚ್‌3ಎನ್‌2 ನಿಗ್ರಹದ ದೃಷ್ಟಿಯಿಂದ ಆರೋಗ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಎಲ್ಲ ಕ್ರಮ ತೆಗೆದುಕೊಳ್ಳಬೇಕು. ಕೊರೊನಾ ನಿರೋಧಕ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು. ಎರಡು ಡೋಸ್‌ ಪಡೆದವರಿಗೆ ಬೂಸ್ಟರ್‌ ಡೋಸ್‌ ನೀಡಬೇಕು. ಇವುಗಳ ಜತೆಗೆ ಜನರು ಸಾಮಾಜಿಕ ಅಂತರ ಕಾಪಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಸೇರಿ ವಿವಿಧ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು” ಎಂಬುದಾಗಿ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ: Narendra Modi Meeting: ಕೊರೊನಾ ಕೇಸ್‌ ಏರಿಕೆ ಹಿನ್ನೆಲೆ ಮೋದಿ ಉನ್ನತ ಸಭೆ, ನೀಡಿದ ಖಡಕ್‌ ಸೂಚನೆಗಳೇನು?

Exit mobile version