Site icon Vistara News

ಪಾಕಿಸ್ತಾನದ ವಿವಾದಿತ ಪತ್ರಕರ್ತನ ಜತೆ ಹಮೀದ್‌ ಅನ್ಸಾರಿ ಸ್ನೇಹ ನಿಜಾನಾ? ಬಿಜೆಪಿ ಕೊಟ್ಟಿರುವ ದಾಖಲೆ ಏನು?

Hamid ansari controversy

ನವ ದೆಹಲಿ: ಪಾಕಿಸ್ತಾನದ ವಿವಾದಿತ ಪತ್ರಕರ್ತ ನುಸ್ರತ್‌ ಮಿರ್ಜಾ ಅವರ ಜತೆ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಸ್ನೇಹ ಹೊಂದಿರುವ ಬಗ್ಗೆ ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿದೆ. ಆದರೆ, ಹಮೀದ್‌ ಅನ್ಸಾರಿ ಅವರು ಇದನ್ನು ತಳ್ಳಿ ಹಾಕಿದ್ದಾರೆ. ಭಾರತದಲ್ಲಿ ನಡೆದ ಸಮಾವೇಶವೊಂದಕ್ಕೆ ಹಮೀದ್‌ ಅನ್ಸಾರಿ ಅವರೇ ನುಸ್ರತ್‌ ಮಿರ್ಜಾ ಅವರನ್ನು ಕರೆಸಿದ್ದರು ಎಂದು ಬಿಜೆಪಿ ಹೇಳಿದ್ದರೆ, ನನಗೆ ನುಸ್ರತ್‌ ಮಿರ್ಜಾ ಪರಿಚಯವೇ ಇಲ್ಲ ಎನ್ನುವುದು ಅನ್ಸಾರಿ ವಾದ. ಇದೀಗ ಅವರಿಬ್ಬರ ಸ್ನೇಹಕ್ಕೆ ಸಂಬಂಧಿಸಿ ಬಿಜೆಪಿ ಕೆಲವೊಂದು ದಾಖಲೆಗಳನ್ನೇ ಬಿಡುಗಡೆ ಮಾಡಿದೆ.

ಪಾಕಿಸ್ತಾನಿ ಪತ್ರಕರ್ತ ನುಸ್ರತ್‌ ಮಿರ್ಜಾ ಅವರು ಇತ್ತೀಚೆಗೆ ಭಾರತದ ಪಾಲಿಗೆ ಅತ್ಯಂತ ಆತಂಕಕಾರಿಯಾದ ಸಂಗತಿಯೊಂದನ್ನು ಹೇಳಿಕೊಂಡಿದ್ದರು. ೨೦೦೫ರಿಂದ ೨೦೧೧ರ ನಡುವೆ ಯುಪಿಎ ಸರಕಾರದ ಅವಧಿಯಲ್ಲಿ ಉಪರಾಷ್ಟ್ರಪತಿಯಾಗಿದ್ದ ಹಮೀದ್‌ ಅನ್ಸಾರಿ ಅವರು ತನ್ನನ್ನು ಐದು ಬಾರಿ ಭಾರತಕ್ಕೆ ಆಹ್ವಾನ ನೀಡಿದ್ದರು. ಈ ವೇಳೆ ತಾನು ಭಾರತಕ್ಕೆ ಸಂಬಂಧಿಸಿದ ಕೆಲವೊಂದು ಮಹತ್ವದ, ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ ದೇಶದ ಗೂಢಚರ ಸಂಸ್ಥೆಯಾಗಿರುವ ಐಎಸ್‌ಐಗೆ ಒಪ್ಪಿಸಿರುವುದಾಗಿ ಹೇಳಿದ್ದರು.

ಮಿರ್ಜಾನ ಈ ಹೇಳಿಕೆಯನ್ನು ಎತ್ತಿಕೊಂಡ ಬಿಜೆಪಿ ಕಾಂಗ್ರೆಸ್‌ ನಾಯಕರಾಗಿರುವ ಹಮೀದ್‌ ಅನ್ಸಾರಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡಿದೆ. ಆದರೆ, ಅನ್ಸಾರಿ ಅವರು ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ʻʻಉಪರಾಷ್ಟ್ರಪತಿಗಳು ಸರಕಾರದ ಸೂಚನೆಯಂತೆ ವಿದೇಶಿ ಗಣ್ಯರಿಗೆ ಆಹ್ವಾನ ನೀಡುವುದು ಸ್ವಾಭಾವಿಕ ಮತ್ತು ಎಲ್ಲರಿಗೂ ಗೊತ್ತಿರುವ ಪ್ರಕ್ರಿಯೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ವ್ಯವಹಾರಗಳ ಖಾತೆಯ ಮೂಲಕ ಮಾಡಲಾಗುತ್ತದೆ. ನಾನು ೨೦೧೦ರ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ನ್ಯಾಯವೇತ್ತರ ಒಂದು ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ನಿಜ. ಸಾಮಾನ್ಯ ಪ್ರಕ್ರಿಯೆಯಂತೆ ಸಂಘಟಕರು ಆಹ್ವಾನಿತರ ಪಟ್ಟಿಯನ್ನು ತಯಾರಿಸಿರಬಹುದು. ಆದರೆ, ನಾನು ಎಂದೂ ಅವರನ್ನು ಸ್ವಾಗತಿಸಿಲ್ಲ ಇಲ್ಲವೇ ಭೇಟಿಯಾಗಲೂ ಇಲ್ಲʼʼ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಫೋಟೊ ಬಿಡುಗಡೆ
ನನಗೂ ಮಿರ್ಜಾನಿಗೂ ಯಾವುದೇ ಸ್ನೇಹ ಇಲ್ಲ, ನಾನು ಅವರನ್ನು ಭೇಟಿಯಾಗಲೇ ಇಲ್ಲ ಎಂದು ಹಮೀದ್‌ ಅನ್ಸಾರಿ ಅವರು ಖಂಡತುಂಡವಾಗಿ ಹೇಳುತ್ತಿದ್ದಂತೆಯೇ ಇತ್ತ ಬಿಜೆಪಿಯ ವಕ್ತಾರ ಗೌರವ ಗುಪ್ತಾ ಅವರು ಪತ್ರಿಕಾಗೋಷ್ಠಿಯೊಂದನ್ನು ನಡೆಸಿ, ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಕುಳಿತಿರುವ ಚಿತ್ರವನ್ನು ಬಿಡುಗಡೆ ಮಾಡಿದೆ.

ವಿವಾದ ನಡೆದು ಬಂದ ಬಗೆ
ಜುಲೈ ೧೦:
ಪಾಕಿಸ್ತಾನದ ಯೂ ಟ್ಯೂಬ್‌ ಚಾನೆಲ್‌ ದ ಕ್ರಿಟಿಕಲ್‌ ಪ್ಯಾಟ್ರಿಯಾಟ್‌ನಲ್ಲಿ ಕಾಣಿಸಿಕೊಂಡ ಪತ್ರಕರ್ತ ನುಸ್ರತ್‌ ಮಿರ್ಜಾ ತಾನು ಭಾರತಕ್ಕೆ ಹೋಗಿ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿದ್ದಾಗಿ ಹೇಳಿಕೊಂಡಿದ್ದರು. ೨೦೦೭ ಮತ್ತು ೨೦೧೦ರ ನಡುವೆ ದಿಲ್ಲಿ ಮತ್ತು ಆಲಿಗಢದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ ಮತ್ತು ಅಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಆಗ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಅಶ್ಫಕ್‌ ಪರ್ವೇಜ್‌ ಕಯಾನಿ ಅವರಿಗೆ ಹಸ್ತಾಂತಿಸಿದ್ದಾಗಿ ಹೇಳಿಕೊಂಡಿದ್ದರು. ಅವರು ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ೨೦೧೦ರಲ್ಲಿ ನಡೆದ ಭಯೋತ್ಪಾದನೆಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಆಗ ಉಪರಾಷ್ಟ್ರಪತಿಯಾಗಿದ್ದ ಹಮೀದ್‌ ಅನ್ಸಾರಿ ಅವರೂ ಭಾಗವಹಿಸಿದ್ದರು ಎಂದು ಹೇಳಿದ್ದರು.

ಜುಲೈ ೧೨: ಹಮೀದ್‌ ಅನ್ಸಾರಿ ಅವರು ಉಪರಾಷ್ಟ್ರಪತಿ ಆಗಿದ್ದಾಗ ಅವರ ವಿಶೇಷಾಧಿಕಾರಿಯಾಗಿದ್ದ ಗುರುದೀಪ್‌ ಸಿಂಗ್‌ ಸಪ್ಪಲ್‌ ಅವರು ನುಸ್ರತ್‌ ಮಿರ್ಜಾ ಅವರ ಹೇಳಿಕೆಯನ್ನು ನಿರಾಕರಿಸಿದ್ದರು. ಇದು ರಾಜಕೀಯ ಪ್ರೇರಿತ, ಕ್ಷುಲ್ಲಕ ಆರೋಪ ಎಂದು ಹೇಳಿದ್ದರು. ತನ್ನನ್ನು ಹಮೀದ್‌ ಅನ್ಸಾರಿ ಅವರು ಸ್ವಾಗತಿಸಿದ್ದು ಎಂದು ಮಿರ್ಜಾ ಎಲ್ಲೂ ಹೇಳಿಲ್ಲ. ಅನ್ಸಾರಿ ಅವರು ಈ ಯಾವ ಕಾರ್ಯಕ್ರಮಗಳ ಸಂಘಟಕರೂ ಆಗಿರಲಿಲ್ಲ, ಅಥವಾ ಅವರು ಯಾರನ್ನೂ ಆಹ್ವಾನಿಸಿಲ್ಲ ಎಂದಿದ್ದರು.

ಜುಲೈ ೧೩: ನುಸ್ರತ್‌ ಮಿರ್ಜಾ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ವಕ್ತಾರ ಗೌರವ ಭಾಟಿಯಾ ಅವರು ಕಾಂಗ್ರೆಸ್‌ ಮತ್ತು ಅನ್ಸಾರಿ ಮೇಲೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಮತ್ತು ಅನ್ಸಾರಿ ದೇಶಕ್ಕೆ ದ್ರೋಹ ಮಾಡಿದ್ದಾರೆ ಎನ್ನುವುದು ಅವರ ನೇರ ಆರೋಪ. ಇದಕ್ಕೆ ಪ್ರತಿಯಾಗಿ ಅನ್ಸಾರಿ ಅವರೇ ಹೇಳಿಕೆ ನೀಡಿ, ೨೦೧೦ರ ಡಿಸೆಂಬರ್‌ನಲ್ಲಿ ನಡೆದ ಭಯೋತ್ಪಾದನೆ ಕುರಿತ ಸಮಾವೇಶದಲ್ಲಿ ಭಾಗವಹಿಸುವ ಗಣ್ಯರ ಪಟ್ಟಿಯನ್ನು ತಯಾರಿಸಿದ್ದು ಆಯೋಜಕರೇ ಹೊರತು ನಾನಲ್ಲ. ನಾನು ಮಿರ್ಜಾ ಅವರನ್ನು ಆಹ್ವಾನಿಸಿಯೂ ಇಲ್ಲ, ಭೇಟಿ ಮಾಡಿಯೂ ಇಲ್ಲ ಎಂದಿದ್ದರು.

ಜುಲೈ ೧೪: ಹಿರಿಯ ನ್ಯಾಯವಾದಿ ಮತ್ತು ೨೦೧೦ರ ಸಮಾವೇಶವನ್ನು ಸಂಘಟಿಸಿದ್ದ ಆದಿಶ್‌ ಅಗರ್ವಾಲ್‌ ಅವರು ಮಿರ್ಜಾ ಮತ್ತು ಅನ್ಸಾರಿ ಮುಖಾಮುಖಿಯ ಚಿತ್ರವನ್ನು ಬಿಡುಗಡೆ ಮಾಡಿದರು. ೨೦೦೯ರ ಅಕ್ಟೋಬರ್‌ನಲ್ಲಿ ಜಾಮಾ ಮಸೀದಿ ಯುನೈಟೆಡ್‌ ಫ್ರಂಟ್‌ ಸಂಘಟಿಸಿದ ಒಂದು ಕಾರ್ಯಕ್ರಮದಲ್ಲಿ ಮಿರ್ಜಾ ಮತ್ತು ಅನ್ಸಾರಿ ವೇದಿಕೆ ಹಂಚಿಕೊಂಡ ಚಿತ್ರವದು. ೨೦೧೦ರ ಸಮಾವೇಶಕ್ಕೆ ಮಿರ್ಜಾ ಅವರನ್ನು ಕರೆಸಬೇಕೆಂದು ಉಪರಾಷ್ಟ್ರಪತಿ ಕಾರ್ಯಾಲಯದಿಂದ ಸೂಚನೆ ಬಂದಿತ್ತು. ಕೊನೆಗೆ ಕರೆಸಿಲ್ಲ ಎಂದು ಅನ್ಸಾರಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ಒಂದು ಗಂಟೆ ಇರುವುದಾಗಿ ಹೇಳಿದ್ದ ಅನ್ಸಾರಿ ಅವರು ಕೊನೆಗೆ ಇಪ್ಪತ್ತೇ ನಿಮಿಷ ಇರುವುದಾಗಿ ಹೇಳಿದ್ದರು ಎಂದು ಅಗರ್ವಾಲ್‌ ಹೇಳಿದ್ದರು.

ಜುಲೈ ೧೫: ಅಗರ್ವಾಲ್‌ ಅವರ ಆರೋಪವನ್ನು ಅನ್ಸಾರಿ ಅವರು ನಿರಾಕರಿಸಿದ್ದಾರೆ. ಆದರೆ, ಅಗರ್ವಾಲ್‌ ಅವರು ಬಿಡುಗಡೆ ಮಾಡಿರುವ ಫೋಟೊವನ್ನು ಇಟ್ಟುಕೊಂಡು ಈಗ ಬಿಜೆಪಿ ಅನ್ಸಾರಿ ಮತ್ತು ಕಾಂಗ್ರೆಸ್‌ ಮೇಲೆ ಟೀಕಾ ಪ್ರಹಾರವನ್ನು ಮುಂದುವರಿಸಿದೆ.

Exit mobile version