ಚೆನ್ನೈ, ತಮಿಳುನಾಡು: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (MK Stalin turns 70) ಅವರು ಮಾರ್ಚ್ 1ರಂದು 70ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪ್ರಮುಖ ನಾಯಕರು, ಹಲವು ದೇಶಗಳ ರಾಯಭಾರಿಗಳು, ಡಿಎಂಕೆ ಪಕ್ಷದರ ಕಾರ್ಯಕರ್ತರು ಶುಭ ಕೋರಿದ್ದಾರೆ. ಈ ಹುಟ್ಟುಹಬ್ಬ ಸಂದರ್ಭವನ್ನು ಬಳಸಿಕೊಂಡು ಪ್ರತಿಪಕ್ಷದ ನಾಯಕರನ್ನು ಒಂದುಗೂಡಿಸುವುದು ಮತ್ತು ಸ್ಟಾಲಿನ್ ಅವರನ್ನು ರಾಷ್ಟ್ರೀಯ ನಾಯಕ ಎಂಬಂತೆ ಬಿಂಬಿಸುವ ಕಾರ್ಯಕ್ಕೆ ಡಿಎಂಕೆ ಮುಂದಾಗಿತ್ತು. ಆದರೆ, ಈ ಯೋಜನೆಗೆ ಸ್ವಲ್ಪ ಹಿನ್ನಡೆಯಾದಂತಿದೆ. ಕಾಂಗ್ರೆಸ್, ಜೆಡಿಯು, ಟಿಎಂಸಿ, ಎನ್‌ಸಿಪಿ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕೇವಲ ನಾಲ್ವರು ನಾಯಕರು ಮಾತ್ರ ಬರ್ತ್‌ಡೇ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ, ರಾಷ್ಟ್ರೀಯ ಜನತಾ ದಳ ನಾಯಕ ಹಾಗೂ ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಮಾತ್ರ ಪಾಲ್ಗೊಂಡಿದ್ದರು. ಡಿಎಂಕೆ ನಾಯಕರೂ ಆಗಿರುವ ಸ್ಟಾಲಿನ್ ಅವರ ಬರ್ತ್‌ಡೇ ಮೆರವಣಿಗೆಯನ್ನು ನಡೆಸಲಾಯಿತು.
ಮಮತಾ, ಪವಾರ್ ಗೈರು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಬರ್ತ್‌ಡೇ ಸೆಲೆಬ್ರೇಷನ್‌ಗೆ ಗೈರು ಹಾಜರಾದ ನಾಯಕರ ಪೈಕಿ ಪ್ರಮುಖರಾಗಿದ್ದಾರೆ. ವಿಶೇಷ ಎಂದರೆ, ಮಾರ್ಚ್ 1 ನಿತೀಶ್ ಕುಮಾರ್ ಅವರ ಬರ್ತ್‌ಡೇ ಕೂಡ ಹೌದು. ಎನ್ ಸಿ ಪಿ ನಾಯಕ ಶರದ್ ಪವಾರ್ ಹಾಜರಾಗಿರಲಿಲ್ಲ. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಅವರಿಗೆ ಆಹ್ವಾನವನ್ನೇ ನೀಡಿರಲಿಲ್ಲ!
ಎಂ ಕೆ ಸ್ಟಾಲಿನ್‌ಗೆ ಬರ್ತ್ ಡೇ ಶುಭಾಶಯ ಕೋರಿದ ಕನಿಮೋಳಿ
ಇದನ್ನೂ ಓದಿ: Rahul Gandhi: ಪ್ರತಿಪಕ್ಷಗಳು ಒಂದಾದರೆ ಮೋದಿಯನ್ನು ಸೋಲಿಸುವುದು ಕಷ್ಟವಲ್ಲ! ರಾಹುಲ್ ವಿಶ್ವಾಸ
ಒಟ್ಟಾಗಿ ಹೋರಾಡೋಣ ಎಂದ ಫಾರೂಖ್
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಚುನಾವಣೆ ಬಳಿಕ ಪಿಎಂ ಹುದ್ದೆ ಅತ್ಯುತ್ತಮ ವ್ಯಕ್ತಿಯನ್ನು ಹುಡುಕೋಣ. ಈಗ ನಾವೆಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.