ಲಖನೌ: ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಮತ್ತು ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ನನ್ನು 2006ರಲ್ಲಿ ಅಪಹರಣ ಹಾಗೂ ಹತ್ಯೆ ಆರೋಪದಡಿ ಜೈಲುಪಾಲಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ, ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ (Asad Encounter) ಪುತ್ರ ಅಸಾದ್ ಅಹ್ಮದ್ ಹಾಗೂ ಆತನ ಆಪ್ತ, ಶೂಟರ್ ಗುಲಾಂನನ್ನು ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಎನ್‌ಕೌಂಟರ್ ಕುರಿತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ, ಗುಲಾಂ ತಾಯಿಯು ಎನ್‌ಕೌಂಟರ್‌ಗೆ ಆದೇಶಿಸಿದ ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ.
“ಅಸಾದ್ ಅಹ್ಮದ್ ಜತೆಗೂಡಿ ನನ್ನ ಮಗ ಗುಲಾಂ ಇಂತಹ ಕೃತ್ಯ (ಉಮೇಶ್ ಪಾಲ್ ಕೊಲೆ) ಎಸಗುತ್ತಾನೆ ಎಂದು ಭಾವಿಸಿರಲಿಲ್ಲ. ಗುಲಾಂ ತುಂಬ ಒಳ್ಳೆಯ ಹುಡುಗನಾಗಿದ್ದ. ಆದರೆ, ಕೆಲ ತಿಂಗಳಿಂದ ಆತ ಇಂತಹ ಭಯಂಕರ ಕೃತ್ಯಗಳಲ್ಲಿ ತೊಡಗಿದ್ದ. ಇವರ ಎನ್‌ಕೌಂಟರ್ ಕುರಿತು ಉತ್ತರ ಪ್ರದೇಶ ಸರ್ಕಾರ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ. ಎಲ್ಲ ಗ್ಯಾಂಗ್‌ಸ್ಟರ್‌ಗಳು, ಕ್ರಿಮಿನಲ್‌ಗಳು ಈ ಎನ್‌ಕೌಂಟರ್‌ನಿಂದ ಪಾಠ ಕಲಿಯಬೇಕು. ನಾನು ನನ್ನ ಮಗನ ಶವವನ್ನು ಸ್ವೀಕರಿಸುವುದಿಲ್ಲ. ಆತನ ಹೆಂಡತಿಯು ಶವವನ್ನು ಸ್ವೀಕರಿಸುತ್ತಾಳೆ” ಎಂದು ಗುಲಾಂ ತಾಯಿ ಖುಷ್ನುದಾ ತಿಳಿಸಿದ್ದಾರೆ. ಆದರೆ, ಎನ್‌ಕೌಂಟರ್ ವಿಷಯದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿ ಹಲವರು ಇದನ್ನು ನಕಲಿ ಎನ್‌ಕೌಂಟರ್ ಎಂದು ಜರಿದಿದ್ದಾರೆ.
ಗುಲಾಂ ತಾಯಿ ಹೇಳಿಕೆ
ಅತೀಕ್ ಅಹ್ಮದ್ನ ಈ ಮಗ ಅಸಾದ್ ಅಹ್ಮದ್ ಹೆಸರು ಉಮೇಶ್ ಪಾಲ್ ಅವರ ಕೊಲೆ ಕೇಸ್ನಲ್ಲಿ ಕೇಳಿಬಂದಿತ್ತು. ಇದೇ ಅಸಾದ್ ಜತೆಗೆ ಗುಲಾಂನನ್ನೂ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಇಬ್ಬರೂ ನಾಪತ್ತೆಯಾದ ಕಾರಣ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಕೊನೆಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡವು ಇವರನ್ನು ಎನ್‌ಕೌಂಟರ್ ಮಾಡಿದೆ. ಇದರ ನೇತೃತ್ವವನ್ನು ಡೆಪ್ಯೂಟಿ ಎಸ್ಪಿಗಳಾದ ನವೇಂದು ಮತ್ತು ವಿಮಲ್ ವಹಿಸಿದ್ದರು.
ಹತ್ಯೆಗೀಡಾದ ಇಬ್ಬರೂ ಉಮೇಶ್ ಪಾಲ್ ಕೊಲೆ ಕೇಸ್ನಲ್ಲಿ ಬೇಕಾದವರಾಗಿರುವ ಜತೆ, ಅತೀಕ್ ಅಹ್ಮದ್ನನ್ನು ಉತ್ತರ ಪ್ರದೇಶದಿಂದ ಗುಜರಾತ್ ಜೈಲಿಗೆ ಸಾಗಿಸುವ ಮಾರ್ಗದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯೋಜನೆ ರೂಪಿಸಿದ್ದರು. ಈ ಮಾಹಿತಿ ಸಿಕ್ಕಿದ್ದರಿಂದಲೇ ಅವರಿಬ್ಬರನ್ನೂ ಹಿಡಿಯಲು ಸ್ಪೆಷಲ್ ಟಾಸ್ಕ್ ಫೋರ್ಸ್‌ಅನ್ನು ನಿಯೋಜಿಸಲಾಗಿತ್ತು. ಪೊಲೀಸರನ್ನು ನೋಡಿದ ಅಸಾದ್ ಮತ್ತು ಗುಲಾಂ ಇವರ ಮೇಲೆ ದಾಳಿಗೆ ಯತ್ನಿಸಿದರು. ಆಗ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಇಬ್ಬರೂ ಗಾಯಗೊಂಡಿದ್ದರು. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಬದುಕಲಿಲ್ಲ.
ಇದನ್ನೂ ಓದಿ: ಮಣ್ಣಲ್ಲಿ ಹೂತು ಹಾಕುತ್ತೇನೆ; ಅತೀಕ್ ಅಹ್ಮದ್ ಪುತ್ರನ ಎನ್‌ಕೌಂಟರ್ ಬೆನ್ನಲ್ಲೇ ಯೋಗಿ ಆವಾಜ್ ವೈರಲ್