ಲಖನೌ: ಬಹುಜನ ಸಮಾಜ ಪಾರ್ಟಿ ಶಾಸಕ ರಾಜುಪಾಲ್ ಹತ್ಯೆ ಮತ್ತು ಆ ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ನನ್ನು 2006ರಲ್ಲಿ ಅಪಹರಣ ಮಾಡಿದ್ದ ಆರೋಪದಡಿ ಜೈಲುಪಾಲಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ/ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ (Asad Ahmed Killed) ಪುತ್ರ ಅಸಾದ್ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಎನ್‌ಕೌಂಟರ್ ಹಿಂದೆ ಉತ್ತರ ಪ್ರದೇಶ ವಿಶೇಷ ಕಾರ್ಯ ಪಡೆ (STF) ಯೋಜನೆಯಿದ್ದು, ಇದಕ್ಕೆ ಐಪಿಎಸ್ ಅಧಿಕಾರಿ, ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ಅವರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ಎನ್‌ಕೌಂಟರ್ ಬಳಿಕ ಇವರ ಹೆಸರೇ ಸುದ್ದಿಯಾಗುತ್ತಿದ್ದು, ಯಾರಿವರು, ಇವರ ಹಿನ್ನೆಲೆ ಏನು ಎಂಬ ಕುತೂಹಲ ಮೂಡಿದೆ.
ಎಸ್‌ಟಿಎಫ್ ತಂಡದಲ್ಲಿ ಇದ್ದವರು ಯಾರು?
ಅಸಾದ್ ಅಹ್ಮದ್‌ಗಾಗಿ ಕಾರ್ಯಾಚರಣೆ ನಡೆಸಲು ಉತ್ತರ ಪ್ರದೇಶದ ಎಸ್‌ಟಿಎಫ್ ತಂಡದಲ್ಲಿ ದಕ್ಷ ಅಧಿಕಾರಿಗಳ ಪಡೆಯೇ ಇತ್ತು. ಡೆಪ್ಯೂಟಿ ಎಸ್‌ಪಿಗಳಾದ ನವೇಂದು ಕುಮಾರ್ ಹಾಗೂ ವಿಮಲ್ ಕುಮಾರ್ ಸಿಂಗ್ ಅವರು ಎಸ್‌ಟಿಎಫ್ ತಂಡವನ್ನು ಮುನ್ನಡೆಸಿದ್ದರು. ಇವರಿಗೆ ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ಅವರೇ ಮಾರ್ಗದರ್ಶನ ನೀಡುತ್ತಿದ್ದರು. ಇವರೇ ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದರು.
ಯಾರಿದು ಅಮಿತಾಭ್ ಯಶ್?
ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ 1971ರ ಏಪ್ರಿಲ್ 11ರಂದು ಜನಿಸಿದ ಅಮಿತಾಭ್ ಯಶ್ ದಕ್ಷ ಅಧಿಕಾರಿ ಎನಿಸಿದ್ದಾರೆ. ಇವರು ಐಪಿಎಸ್ ಅಧಿಕಾರಿಯಾಗಿದ್ದು, ಎಡಿಜಿಯಾಗಿ 2021ರಲ್ಲಿ ಬಡ್ತಿ ಪಡೆದಿದ್ದಾರೆ. ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶದಲ್ಲಿ ಇವರು ಎನ್‌ಕೌಂಟರ್ ಸ್ಪೆಷಲಿಸ್ಟ್ ಎನಿಸಿದ್ದಾರೆ. ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಟಿಎಫ್ ಎಸ್‌ಎಸ್‌ಪಿ ಆಗಿದ್ದ ಅಮಿತಾಭ್ ಯಶ್, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಗಡಿಯಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದ ಶಿವ ಕುಮಾರ್ ಪಟೇಲ್‌ನನ್ನು ಎನ್‌ಕೌಂಟರ್ ಮಾಡುವಲ್ಲಿ ಇವರು ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು.
ಅಷ್ಟೇ ಏಕೆ, ಉಮೇಶ್ ಪಾಲ್ ಹತ್ಯೆಯಾದ ಬಳಿಕ ಅತೀಕ್ ಅವರ ಸಹೋದರಿಯು ಎಸ್‌ಟಿಎಫ್ ಚೀಫ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಮಿತಾಭ್ ಯಶ್ ಅವರು ನನ್ನ ಸಹೋದರರನ್ನು ಎನ್‌ಕೌಂಟರ್ ಮಾಡುತ್ತಾರೆ ಎಂದು ಅವರು ಹೇಳಿದ್ದರು. ಅದರಂತೆ ಈಗ ಅಸಾದ್ ಅಹ್ಮದ್‌ನನ್ನು ಎನ್‌ಕೌಂಟರ್ ಮಾಡಿಸುವಲ್ಲಿ ಅಮಿತಾಭ್ ಯಶಸ್ವಿಯಾಗಿದ್ದಾರೆ. ಅಮಿತಾಭ್ ಯಶ್ ಅವರಿಗೆ 2019ರಲ್ಲಿ ಕುಂಭ ಸೇವಾ ಮೆಡಲ್ ದೊರೆತಿದೆ. ಇವರ ಉತ್ಕೃಷ್ಟ ಸೇವೆ ಪರಿಗಣಿಸಿ 2023ರಲ್ಲಿ ಉತ್ಕೃಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಇದೇ ಕಾರಣಕ್ಕಾಗಿಯೇ ಎಸ್‌ಟಿಎಫ್ ಹಾಗೂ ಅಮಿತಾಭ್ ಯಶ್ ಅವರ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Atiq Ahmed: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ ಪುತ್ರನನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಿದ ಉತ್ತರ ಪ್ರದೇಶ ಪೊಲೀಸ್