ನವ ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಾಲಿವುಡ್ ನಟಿ ಆಶಾ ಪಾರೇಖ್ (Asha Parekh) ಅವರಿಗೆ 2020ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.
ದಿಲ್ಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ 68ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಪ್ರದಾನ ಕಾರ್ಯಕ್ರಮದಲ್ಲಿ ಆಶಾ ಪಾರೇಖ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ, ಅತ್ಯುತ್ತಮ ನಟ, ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತ ನಿರ್ದೇಶಕ ಸೇರಿ ಹಲವು ವಿಭಾಗಗಳಲ್ಲಿ ನ್ಯಾಷನಲ್ ಅವಾರ್ಡ್ ವಿತರಿಸಲಾಯಿತು.
ಆಶಾ ಪಾರೇಖ್(Asha Parekh). ಭಾರತೀಯ ಸಿನಿಮಾದ ಪ್ರಭಾವಿ ನಟಿ. 1960 ಮತ್ತು 70ರ ದಶಕದಲ್ಲಿ ಬಾಲಿವುಡ್‌ನಲ್ಲಿ ಅಕ್ಷರಶಃ ಮಿಂಚಿದ ಬೆಡಗಿ. ಆಗಿನ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಖ್ಯಾತಿ ಅವರದ್ದು. ಆಶಾ ಕೇವಲ ನಟಿಯಾಗಿ ಮಾತ್ರವಲ್ಲದೇ, ನಿರ್ದೇಶಕಿ, ನಿರ್ಮಾಪಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 20 ವರ್ಷಗಳ ಕಾಲ ಯಶಸ್ಸಿನ ಅಲೆಯಲ್ಲಿ ತೇಲಿದರು. ಹಿಂದಿ ಸಿನಿಮಾದ ಸಾರ್ವಕಾಲಿಕ ಪ್ರಭಾವಿ ನಟಿ ಅವರು. ಒಂದು ಪೀಳಿಗೆಯನ್ನು ಸಮ್ಮೋಹನಗೊಳಿಸಿದ ಆಶಾ ಪಾರೇಖ್ ಅವರಿಗೆ ಈಗ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ.
ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಇದು ಆಶಾ ಪಾರೇಖ್ ಅವರು 1942 ಅಕ್ಟೋಬರ್ 2ರಂದು ಜನಿಸಿದರು. ತಾಯಿ ಸುಧಾ ಅಲಿಯಾಸ್ ಸಲ್ಮಾ ಪಾರೇಖ್. ಬೋಹ್ರಾ ಮುಸ್ಲಿಮ್. ತಂದೆ ಬಚುಭಾಯಿ ಪಾರೇಖ್. ಗುಜರಾತಿ ಹಿಂದು. ನೃತ್ಯದಲ್ಲಿನ ಆಸಕ್ತಿಯನ್ನು ಗುರುತಿಸಿದ ಆಶಾ ಅವರ ತಾಯಿ, ಅವರನ್ನು ಕ್ಲಾಸಿಕಲ್ ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. ಪಂಡಿತ್ ಬನ್ಸಿಲಾಲ್ ಸೇರಿದಂತೆ ಅನೇಕ ಗುರುಗಳ ಬಳಿ ಶಾಸ್ತ್ರೀಯ ನೃತ್ಯ ಕಲಿತಿದ್ದಾರೆ. ಈ ನೃತ್ಯವೇ ಅವರನ್ನು ಸಿನಿಮಾ ರಂಗಕ್ಕೆ ಕರೆ ತಂದಿತು. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಬಳಿಕ ಭಾರತೀಯ ಚಿತ್ರರಂಗ ದಂತಕತೆಯಾಗಿ ಬೆಳೆದಿರುವುದು ಈಗ ಇತಿಹಾಸ.
ಇದನ್ನೂ ಓದಿ |Asha Parekh | ಬಾಲಿವುಡ್‌ನ ಸಾರ್ವಕಾಲಿಕ ಪ್ರಭಾವಿ ನಟಿ ಆಶಾ ಪಾರೇಖ್