ಜೈಪುರ: ರಾಜಸ್ಥಾನದಲ್ಲಿ ಉಂಟಾದ ಕಾಂಗ್ರೆಸ್ ಬಿಕ್ಕಟ್ಟು ಅನಿರೀಕ್ಷಿತ ತಿರುವು ಪಡೆದಿದೆ. ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡಿದ್ದಕ್ಕೇ ಅವರ ಬಣದ ೯೨ ಶಾಸಕರು ರಾಜೀನಾಮೆ ನೀಡಿ, ಬಂಡಾಯದ ಬಾವುಟ (Rajasthan Congress Crisis) ಹಾರಿಸಿದ ಕಾರಣ ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯ ಕಣದಿಂದಲೇ ಗೆಹ್ಲೋಟ್ ಅವರು ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಬಂಡಾಯದ ಬಾವುಟಕ್ಕೆ ಹೆದರಿ ಕಾಂಗ್ರೆಸ್ ಹೈಕಮಾಂಡೇ ಇಂಥದ್ದೊಂದು ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಕೇನ್ ಅವರು ಇಡೀ ದಿನ ಬಂಡಾಯ ಶಾಸಕರ ಜತೆ ಮಾತುಕತೆ ನಡೆಸಿ, ಮನವೊಲಿಸಲು ಯತ್ನಿಸಿದರೂ ಶಾಸಕರು ಒಪ್ಪದ ಕಾರಣ ಈಗ ಅಶೋಕ್ ಗೆಹ್ಲೋಟ್ ಅವರೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಹಾಗೂ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಮೊದಲಿನಿಂದಲೂ ಗೆಹ್ಲೋಟ್ ಅವರು ನಾನು ರಾಜಸ್ಥಾನ ಬಿಟ್ಟು ಬರುವುದಿಲ್ಲ ಎಂದು ಹೇಳುತ್ತಲೇ ಇದ್ದರು.
ಪುಷ್ಟಿ ನೀಡುವ ಅಂಶ ಯಾವುದು?
ಕಾಂಗ್ರೆಸ್ ನಾಯಕರೊಬ್ಬರು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತ, ಯಾರೆಲ್ಲ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂಬುದರ ಕುರಿತು ವಿವರಿಸಿದ್ದಾರೆ. “ಮುಕುಲ್ ವಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ಚುನಾವಣೆ ಕಣದಲ್ಲಿದ್ದಾರೆ. ಅವರು ಸೆಪ್ಟೆಂಬರ್ ೩೦ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ” ಎಂದು ಹೇಳಿದ ಕಾರಣ ಈಗ ಗೆಹ್ಲೋಟ್ ಅವರು ಕಣದಿಂದ ಹೊರಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | ಪೈಲಟ್ ಆಯ್ಕೆಗೆ ವಿರೋಧ, ಗೆಹ್ಲೋಟ್ ನಿಷ್ಠಾವಂತ 80 ಶಾಸಕರ ರಾಜೀನಾಮೆ, ರಾಜಸ್ಥಾನ ಸರ್ಕಾರ ಸಂಕಷ್ಟದಲ್ಲಿ