Site icon Vistara News

ಇಂಟರ್‌ಲಾಕಿಂಗ್‌ ಬದಲಾವಣೆಯೇ ರೈಲು ದುರಂತಕ್ಕೆ ಕಾರಣ; ಹಾಗಾದರೆ ಏನಿದು ತಂತ್ರಜ್ಞಾನ?

Ashwini Vaishnaw

ನವದೆಹಲಿ: ಒಡಿಶಾದ ಬಹನಗ ರೈಲು ನಿಲ್ದಾಣದ ಬಳಿ ನಡೆದ ಭೀಕರ ರೈಲು ದುರಂತದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದರೂ ಘಟನೆ ಕಾರಣವೇನು ಎಂಬ ಬಗ್ಗೆ ಪ್ರತಿಪಕ್ಷಗಳು, ಸಾರ್ಜಜನಿಕರು ಪ್ರಶ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ರೈಲ್ವೆ ಸುರಕ್ಷತೆ ವಿಭಾಗದ ಆಯುಕ್ತರು ಅಪಘಾತದ ಕುರಿತು ನಡೆಸಿದ ತನಿಖೆಯ ಮಾಹಿತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ನೀಡಿದ್ದಾರೆ. ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಬದಲಾವಣೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

“ರೈಲ್ವೆ ಸುರಕ್ಷತೆ ವಿಭಾಗದ ಆಯುಕ್ತರು ಅಪಘಾತದ ಬಗ್ಗೆ ತನಿಖೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಬದಲಾವಣೆಯೇ ರೈಲು ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ” ಎಂದರು. ‘ಕವಚ್‌’ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ವೈಷ್ಣವ್‌, “ಬಾಲಾಸೋರ್‌ ಅಪಘಾತದ ರೀತಿಯೇ ಬೇರೆ. ಇದರಲ್ಲಿ ಘರ್ಷಣೆ ನಿಗ್ರಹ ವ್ಯವಸ್ಥೆಯೇ ಅನ್ವಯವಾಗುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಏನಿದು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌?

ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಎಂದರೆ, ರೈಲುಗಳ ಸಂಚಾರದ ಮೇಲೆ ನಿಗಾ ಇಡುವ, ಹಳಿಗಳ ಬದಲಾವಣೆ ಗಮನಿಸುವ, ರೈಲ್ವೆ ಜಂಕ್ಷನ್‌ಗಳು, ರೈಲು ನಿಲ್ದಾಣಗಳಲ್ಲಿ ರೈಲುಗಳ ಓಡಾಟ, ದಟ್ಟಣೆ, ಅಪಘಾತದ ಕುರಿತು ಮುನ್ಸೂಚನೆ ನೀಡುವ ಆಧುನಿಕ ವ್ಯವಸ್ಥೆಯಾಗಿದೆ. ಸಾಫ್ಟ್‌ವೇರ್‌ ಹಾಗೂ ಎಲೆಕ್ಟ್ರಾನಿಕ್‌ ಕಾಂಪೋನೆಂಟ್ಸ್‌ ಬಳಸಿ ಇಂತಹ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿರುತ್ತದೆ. ಸಿಗ್ನಲಿಂಗ್‌, ಪಾಯಿಂಟ್ಸ್‌, ಟ್ರ್ಯಾಕ್‌ ಸರ್ಕ್ಯೂಟ್‌ಗಳ ಮಧ್ಯೆ ಸಂವಹನ ಸಾಧಿಸಲು ಕೂಡ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಒಡಿಶಾದಲ್ಲಿ ನಡೆದ ರೈಲು ದುರಂತಕ್ಕೆ ಇದೇ ಇಂಟರ್‌ಲಾಕಿಂಗ್‌ ಬದಲಾವಣೆ ಅಥವಾ ಗೊಂದಲವೇ ಕಾರಣವಾಗಿದೆ ಎಂದು ತನಿಖಾ ವರದಿ ತಿಳಿಸಿದೆ. ಅಂದರೆ, ಸರಿಯಾದ ಸಿಗ್ನಿಲಿಂಗ್‌ ಅಥವಾ ಸರಿಯಾದ ಹಳಿಯ ಮೇಲೆ ರೈಲು ಸಂಚರಿಸಲು ಮಾಹಿತಿ ನೀಡುವಲ್ಲಿ ಲೋಪವಾದ ಕಾರಣ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ರೈಲ್ವೆ ಮಂಡಳಿಯು ಕೂಡ ಸಿಗ್ನಲಿಂಗ್‌ ಲೋಪವೇ ಅಪಘಾತಕ್ಕೆ ಕಾರಣ ಇರಬಹುದು ಎಂಬುದಾಗಿ ಅಂದಾಜಿಸಿದೆ.

ಇದನ್ನೂ ಓದಿ: ಗ್ರೀನ್‌ ಸಿಗ್ನಲ್‌ ಇತ್ತು, ಓವರ್‌ ಸ್ಪೀಡ್‌ ಇರಲಿಲ್ಲ; ದುರಂತದ ಕುರಿತು ಕೊನೆಗೂ ರೈಲ್ವೆ ಮಂಡಳಿ ಮಾಹಿತಿ

“ಗ್ರೀನ್‌ ಸಿಗ್ನಲ್‌ ಜತೆಗೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿಗೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲು ಅನುಮತಿ ನೀಡಲಾಗಿತ್ತು. ಅದರಂತೆ, ಗಂಟೆಗೆ 128 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಆದರೆ, ರೈಲು ಗೂಡ್ಸ್‌ ರೈಲಿಗೆ ಡಿಕ್ಕಿಯಾದ ಕಾರಣ ಭೀಕರವಾಗಿ ಅಪಘಾತ ಸಂಭವಿಸಿತು. ಮೂರು ರೈಲುಗಳ ಮಧ್ಯೆ ಅಪಘಾತವಾಗಲು ಗೊಂದಲ ಕಾರಣವಾಗಿದೆ. ಆದರೆ, ಸಿಗ್ನಲಿಂಗ್‌ ವಿಷಯದ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆ ಮುಗಿದ ಬಳಿಕವೇ ಎಲ್ಲ ಮಾಹಿತಿ ಲಭ್ಯವಾಗಲಿದೆ” ಎಂದು ರೈಲ್ವೆ ಮಂಡಳಿ ಸದಸ್ಯೆ ಜಯಾ ವರ್ಮಾ ಸಿನ್ಹಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Exit mobile version