ಗುವಾಹಟಿ: ಅಸ್ಸಾಂ ಬಿಜೆಪಿ ನಾಯಕಿ ಇಂದ್ರಾಣಿ ತಹಬಿಲ್ದಾರ್ (48) (Indrani Tahbildar) ಅವರು ಗುವಾಹಟಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗ ರಾಜಕೀಯ ಸಂಚಲನ ಮೂಡಿಸಿದೆ. ಬಿಜೆಪಿಯ ಹಿರಿಯ ನಾಯಕ ಅನುರಾಗ್ ಚಾಲಿಹಾ ಅವರ ಜತೆ ಆತ್ಮೀಯವಾಗಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ ಹಿನ್ನೆಲೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ.
ಅಸ್ಸಾಂ ಬಿಜೆಪಿ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಹೊಂದಿದ್ದರು. ರಾಜ್ಯದಲ್ಲಿ ಪ್ರಮುಖ ನಾಯಕಿ ಎನಿಸಿದ್ದರು. ಆದರೆ, ಇವರು ಪಕ್ಷದ ಟಾಪ್ ಲೀಡರ್ ಜತೆ ಇದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರಿಂದ ಅವಮಾನಕ್ಕೀಡಾದಂತಾದ ಇಂದ್ರಾಣಿ ತಹಬಿಲ್ದಾರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗುವಾಹಟಿಯ ಬಮುನಿ ಮೈದಾನ ಪ್ರದೇಶದಲ್ಲಿರುವ ನಿವಾಸದಲ್ಲಿ ಇಂದ್ರಾಣಿ ತಹಬಿಲ್ದಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ಪ್ರಕರಣದ ಕುರಿತು ನಾವು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಂದ್ರಾಣಿ ತಹಬಿಲ್ದಾರ್ ಅವರು ಬೇರೊಬ್ಬ ವ್ಯಕ್ತಿ ಜತೆಗಿರುವ ಫೋಟೊಗಳು ಲೀಕ್ ಆಗಿರುವ ಕುರಿತು ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ” ಎಂದು ಗುವಾಹಟಿ ಸೆಂಟ್ರಲ್ ಡಿಜಿಪಿ ದೀಪಕ್ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ: Sana Khan Case: ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ, ಪತಿಯ ಬಂಧನ; ಭೇಟಿಗೆ ಬಂದ ಪತ್ನಿಯ ಕೊಂದಿದ್ದೇ ದುರಂತ
ಇಂದ್ರಾಣಿ ತಹಬಿಲ್ದಾರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುವಾಹಟಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಇನ್ನು ಇಂದ್ರಾಣಿ ತಹಬಿಲ್ದಾರ್ ಅವರ ಆತ್ಮಹತ್ಯೆ ಪ್ರಕರಣವು ಪ್ರತಿಪಕ್ಷಗಳು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಟೀಕೆ ವ್ಯಕ್ತಪಡಿಸಲು ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ಪಕ್ಷದ ನಾಯಕಿಯರಿಗೇ ರಕ್ಷಣೆ ಇಲ್ಲ. ಇನ್ನು ಇವರು ಸಾಮಾನ್ಯ ಹೆಣ್ಣುಮಕ್ಕಳನ್ನು ಹೇಗೆ ರಕ್ಷಿಸುತ್ತಾರೆ ಎಂದು ಟೀಕಿಸಲಾಗುತ್ತಿದೆ.