ಹೈದ್ರಾಬಾದ್: ಹೈದ್ರಾಬಾದ್‌ನ ಗಣೇಶ ವಿಸರ್ಜನಾ ರ್ಯಾಲಿಯಲ್ಲಿ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಭಾಗವಹಿಸಿದ್ದರು. ಈ ವೇಳೆ, ವ್ಯಕ್ತಿಯೊಬ್ಬ ಅವರ ಮುಂದಿದ್ದ ಮೈಕ್ ಕಿತ್ತೆಸೆದು, ಅವರೊಂದಿಗೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್ (Viral Video) ಆಗಿದೆ.
ಗಣೇಶ ವಿಸರ್ಜನಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಭಾಗ್ಯನಗರ ಗಣೇಶ ಉತ್ಸವ ಸಮಿತಿಯು ಅಸ್ಸಾಮ್ ಮುಖ್ಯಮಂತ್ರಿಯಾಗಿರುವ ಹಿಮಂತ್ ಬಿಸ್ವಾ ಶರ್ಮಾ ಹಾಗೂ ಉಡುಪಿ ಶ್ರೀ ಪೇಜಾವರ ಸ್ವಾಮಿ ಧರ್ಮಾಧಿಕಾರಿ ಅವರಿಗೆ ಆಹ್ವಾನ ನೀಡಿತ್ತು. ನಾವು ಪ್ರತಿ ವರ್ಷ ಮುಖ್ಯಮಂತ್ರಿಯೊಬ್ಬರಿಗೆ ಆಹ್ವಾನ ನೀಡುತ್ತೇವೆ. ಈ ವರ್ಷ ಅಸ್ಸಾಮ್ ಸಿಎಂಗೆ ಆಹ್ವಾನಿಸಿದ್ದೆವು. ಜತೆಗೆ, ಉಡುಪಿ ಪೇಜಾವರ ಸ್ವಾಮೀಜಿ ಅವರಿಗೂ ಆಹ್ವಾನ ನೀಡಿದ್ದೆವು ಎಂದು ಭಾಗ್ಯನಗರ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಗವಂತ್ ರಾವ್ ಅವರು ತಿಳಿಸಿದ್ದಾರೆ.
ಅದೇ ರೀತಿ ಶೋಭಾಯಾತ್ರೆ ವೇಳೆ ಆಯೋಜಿಸಲಾಗಿದ್ದ ವೇದಿಕೆಯ ಮೇಲೆ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸೇರಿ ಮತ್ತಿತರರಿದ್ದರು. ಈ ವೇಳೆ, ಸಿಎಂ ಶರ್ಮಾ ಅವರ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಮೈಕ್‌ನಲ್ಲಿ ಮಾತನಾಡುತ್ತಿರುವಾಗಲೇ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮೈಕ್ ಎಳೆದುಕೊಂಡು, ಹಿಮಂತ್ ಬಿಸ್ವಾ ಶರ್ಮಾ ಅವರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಕೂಡಲೇ ಸಿಎಂ ಅವರ ಭದ್ರತಾ ಸಿಬ್ಬಂದಿ ಮತ್ತು ಅಲ್ಲಿದ್ದ ಕೆಲವರು ಆ ವ್ಯಕ್ತಿಯನ್ನು ಸ್ಟೇಜ್ ಹಿಂದಕ್ಕೆ ಎಳೆದುಕೊಂಡು ಹೋಗುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಈಗ ವೈರಲ್ ಆಗಿದೆ.
ಇದನ್ನು ಓದಿ |Spinning Swing | ಮೇಲಿನಿಂದ ನೆಲಕ್ಕೆ ಅಪ್ಪಳಿಸಿದ ಸ್ಪಿನ್ನಿಂಗ್ ಸ್ವಿಂಗ್! 10ಕ್ಕೂ ಹೆಚ್ಚು ಜನರಿಗೆ ಗಾಯ, ವಿಡಿಯೋ ವೈರಲ್