ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಬಾಲ್ಯ ವಿವಾಹದ ವಿರುದ್ಧ ಸಾರಿರುವ ಸಮರವು ಅಸ್ಸಾಂನಲ್ಲಿ ಸಂಚಲನ ಮೂಡಿಸಿದೆ. ಹಾಗೆಯೇ, ಇದು ದೇಶಾದ್ಯಂತ ಸುದ್ದಿಯಾಗಿದೆ. ಸಾವಿರಾರು ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ನೂರಾರು ಮದುವೆಗಳನ್ನು ರದ್ದುಗೊಳಿಸಲಾಗಿದೆ. ಒಂದು ವಲಯದ ಜನರು ಸರ್ಕಾರದ ನಿರ್ಧಾರ ಸರಿ ಎನ್ನುತ್ತಿದ್ದರೆ, ಪ್ರತಿಪಕ್ಷಗಳು ಇದೊಂದು ಸಾರ್ವಜನಿಕರ ಗಮನ ಸೆಳೆಯಲು ಮಾಡಿದ ತಂತ್ರ ಎಂದು ಕರೆದಿವೆ. ಹಾಗಾದರೆ, ಏನಿದು ಬಾಲ್ಯ ವಿವಾಹ ತಡೆ ಕಾನೂನು? ರಾಜ್ಯ ಸರ್ಕಾರ ಪಟ್ಟಿಗೆ ಬಿದ್ದು ಜಾರಿಗೆ ತಂದಿದ್ದೇಕೆ? ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿಯೇ ಇಂದಿನ ವಿಸ್ತಾರ Explainer.
ಕಾನೂನು ಏನು ಹೇಳುತ್ತದೆ?
ಅಸ್ಸಾಂ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಂತೆ ನೂತನ ಕಾನೂನಿನ ಅನ್ವಯ ಬಾಲ್ಯ ವಿವಾಹವಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾದರೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ, ೧೪-೧೮ ವರ್ಷದೊಳಗಿನ ಬಾಲಕಿಯರನ್ನು ಮದುವೆಯಾದರೆ, ಅವರ ವಿರುದ್ಧ ೨೦೦೬ರ ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ನೂತನ ಕಾನೂನು ಜಾರಿಗೆ ತಂದ ಬಳಿಕ ಇದುವರೆಗೆ ಮದುವೆ ಮಾಡಿರುವ ಖಾಜಿಗಳೂ ಸೇರಿದಂತೆ ೨,೫೦೦ಕ್ಕೂ ಹೆಚ್ಚಿನ ಜನರನ್ನು ಬಂಧಿಸಲಾಗಿದೆ. ೪ ಸಾವಿರಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸರ್ಕಾರದ ದಿಟ್ಟ ಕ್ರಮ ಏಕೆ?
ಅಸ್ಸಾಂನಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲಿಯೇ ಬಾಲ್ಯ ವಿವಾಹಗಳ ಸಂಖ್ಯೆ ಅಸ್ಸಾಂನಲ್ಲಿ ಹೆಚ್ಚಿದೆ. ಕೆಲ ವರ್ಷಗಳಲ್ಲಿ ೮ ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ನಡೆದಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಅಸ್ಸಾಂನಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹ ಹಾಗೂ ಶಿಶು ಮರಣ ಪ್ರಮಾಣ ಇದೆ ಎಂದು ತಿಳಿಸಿದೆ. ರಾಜ್ಯದಲ್ಲಿ ನಡೆದ ಮದುವೆಗಳಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ.೩೧ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ. ರಾಷ್ಟ್ರ ಮಟ್ಟದಲ್ಲಿ ಬಾಲ್ಯವಿವಾಹ ಪ್ರಮಾಣ ಶೇ.೨೩ರಷ್ಟಿದೆ. ಆದರೆ, ಅಸ್ಸಾಂನಲ್ಲಿ ಗಣನೀಯವಾಗಿ ಏರಿಕೆಯಾದ ಕಾರಣ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ.
ಪ್ರತಿಪಕ್ಷಗಳ ವಿರೋಧ
ಅಸ್ಸಾಂ ಸರ್ಕಾರವು ಬಾಲ್ಯ ವಿವಾಹ ತಡೆಯಲು ಕಠಿಣ ಕಾನೂನು ರೂಪಿಸಿರುವುದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಸಾರ್ವಜನಿಕರ ಗಮನ ಸೆಳೆಯಲು ಸರ್ಕಾರ ಮಾಡಿರುವ ತಂತ್ರ ಎಂದು ಟೀಕಿಸಿವೆ. “ಬಿಜೆಪಿಯು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂತಹ ಕಾನೂನು ರೂಪಿಸಿದೆ. ಅಲ್ಲದೆ, ಪಕ್ಷಪಾತದಿಂದ ವರ್ತಿಸಿ, ಒಂದೇ ಸಮುದಾಯದವರನ್ನು ಗುರಿಯಾಗಿಸುತ್ತಿದೆ” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ದೂರಿದ್ದಾರೆ. ಹಾಗೆಯೇ, ಬಾಲಕಿಯರನ್ನು ಮದುವೆಯಾದವರನ್ನು ಬಂಧಿಸಿದ ಕಾರಣ, ಅವರ ಕುಟುಂಬಸ್ಥರು ಸರ್ಕಾರದ ವಿರುದ್ಧ ಹಲವೆಡೆ ಪ್ರತಿಭಟನೆಗಳನ್ನೂ ನಡೆಸಿದ್ದಾರೆ.
ಮುಸ್ಲಿಮರ ವಿರುದ್ಧ ಸರ್ಕಾರ ಗುರಾಣಿ ಬಳಸುತ್ತಿದೆಯೇ?
ಬಾಲ್ಯ ವಿವಾಹ ತಡೆಗೆ ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರವು ಮುಸ್ಲಿಮರ ವಿರುದ್ಧ ತಂತ್ರ ರೂಪಿಸಿದೆ ಎಂದೇ ಟೀಕಿಸಲಾಗುತ್ತಿದೆ. ಆದರೆ, ಇದುವರೆಗೆ ಬಂಧನಕ್ಕೀಡಾಗಿರುವವರಲ್ಲಿ ಎಲ್ಲ ಧರ್ಮ, ಜಾತಿ, ಸಮುದಾಯದವರಿದ್ದಾರೆ. ಅಷ್ಟೇ ಏಕೆ, ೫೦ಕ್ಕೂ ಅಧಿಕ ಅರ್ಚಕರನ್ನೂ ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, ಬಂಧನಕ್ಕೀಡಾದವರಲ್ಲಿ ಎಷ್ಟು ಮುಸ್ಲಿಮರಿದ್ದಾರೆ ಎಂಬ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ.
ಮದುವೆ ರದ್ದಾದ ಕಾರಣ ಬಾಲಕಿ ಆತ್ಮಹತ್ಯೆ
ರಾಜ್ಯ ಸರ್ಕಾರವೇನೋ ಹೆಣ್ಣುಮಕ್ಕಳ ಆರೋಗ್ಯ, ರಕ್ಷಣೆ ದೃಷ್ಟಿಯಿಂದ ಬಾಲ್ಯವಿವಾಹ ತಡೆಗೆ ಕಾನೂನು ರೂಪಿಸಿದೆ. ಆದರೆ, ಇದರಿಂದಾಗಿ ನೂರಾರು ಮದುವೆಗಳು ರದ್ದಾಗಿದ್ದು, ಕಚಾರ್ ಜಿಲ್ಲೆಯಲ್ಲಿ ಇದೇ ಕಾರಣಕ್ಕಾಗಿ ೧೭ ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಹಲವೆಡೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕಿಯರು ಬೆದರಿಕೆ ಹಾಕಿದ್ದಾರೆ. ಹಾಗಾಗಿಯೇ, ಹಿಮಂತ ಬಿಸ್ವಾ ಶರ್ಮಾ ಅವರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಇದು ನಿಮ್ಮ ರಕ್ಷಣೆಗೆ ತಂದಿರುವ ಕಾನೂನು ಎಂದು ಮನವಿ ಮಾಡಿದ್ದಾರೆ. ಆದರೂ, ಸಾರ್ವಜನಿಕ ವಲಯದಲ್ಲೂ ಕಠಿಣ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಹೆಣ್ಣುಮಕ್ಕಳ ಮದುವೆ ವಯಸ್ಸು ಹೆಚ್ಚಿಸಲು ಕೇಂದ್ರದಿಂದಲೂ ಪ್ರಯತ್ನ
ಸದ್ಯ, ದೇಶದಲ್ಲಿ ೧೮ ವರ್ಷ ತುಂಬಿದ ಹೆಣ್ಣುಮಕ್ಕಳು ಕಾನೂನುಬದ್ಧವಾಗಿ ಮದುವೆಯಾಗಬಹುದಾಗಿದೆ. ಆದರೆ, ಇದು ಕೂಡ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ೨೧ಕ್ಕೆ ಏರಿಕೆ ಮಾಡುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ. ಹಾಗಾಗಿಯೇ, ೨೦೨೧ರಲ್ಲಿ ಬಾಲ್ಯ ವಿವಾಹ ತಡೆ (ತಿದ್ದುಪಡಿ) ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿತು. ಆದರೆ, ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ ಕಾರಣ ವಿಧೇಯಕದ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಆದರೆ, ಸಮಿತಿಯು ಇನ್ನೂ ವರದಿ ಸಲ್ಲಿಸಿಲ್ಲ.
ಇದನ್ನೂ ಓದಿ: Child Marriages: ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿರುವ ಅಸ್ಸಾಂ ಸರ್ಕಾರ; ಇದುವರೆಗೆ 60 ಖಾಜಿಗಳು ಸೇರಿ 2278 ಮಂದಿ ಬಂಧನ