Site icon Vistara News

Assam Flood: ಅಸ್ಸಾಂನಲ್ಲಿ ಧಾರಾಕಾರ ಮಳೆ; 52 ಮಂದಿಯ ಜೀವ ಕಸಿದುಕೊಂಡ ಭೀಕರ ಪ್ರವಾಹ

Assam Flood

Assam Flood

ದಿಸ್ಪುರ: ದೇಶದ ವಿವಿಧ ಭಾಗಳಲ್ಲಿ ಮುಂಗಾರು ಅಬ್ಬರಿಸುತ್ತಿದೆ. ಕರ್ನಾಟಕ ಮಲೆನಾಡು, ಕರಾವಳಿ ಮುಂತಾದ ಭಾಗಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಇತ್ತ ಉತ್ತರ ಭಾರತದಲ್ಲಿಯೂ ಪ್ರವಾಹ ಸಂಕಷ್ಟ ತಂದಿತ್ತಿದೆ. ಅದರಲ್ಲಿಯೂ ಅಸ್ಸಾಂನಲ್ಲಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಸುಮಾರು 52 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ (Assam Flood). ನೆರೆಯಿಂದಾಗಿ ಅಂದಾಜು 24 ಲಕ್ಷ ಮಂದಿ ತೊಂದರೆಗೆ ಒಳಗಾಗಿದ್ದಾರೆ. ರಾಜ್ಯದ ಮುಕ್ಕಾಲು ಭಾಗಗಳಲ್ಲಿ ನೆರೆ ಆವರಿಸಿದೆ. ರಾಜ್ಯದ 35 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ತೀವ್ರವಾಗಿ ಪ್ರವಾಹದ ಹೊಡೆತಕ್ಕೆ ಸಿಲುಕಿವೆ.

ಒಂದು ತಿಂಗಳಿನಿಂದ ಇಲ್ಲಿನ ಪರಿಸ್ಥಿತಿ ಭೀಕರವಾಗಿದ್ದು, ಪ್ರಾಣಹಾನಿಯ ಜತೆಗೆ ವ್ಯಾಪಕ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗಿದೆ. ಈ ಈಶಾನ್ಯ ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಒಂದು ತಿಂಗಳ ಹಿಂದೆ ನನ್ನ ಮನೆ ಸಂಪೂರ್ಣವಾಗಿ ನಾಶವಾಯಿತು. ಈಗ ನಾನು ಮತ್ತು ನನ್ನ ಕುಟುಂಬ ಪರಿಹಾರ ಶಿಬಿರದಲ್ಲಿ ತಾತ್ಕಾಲಿಕ ಟೆಂಟ್‌ನಲ್ಲಿ ವಾಸಿಸುತ್ತಿದ್ದೇವೆ. ನಮಗೆ ಮನೆ ಇಲ್ಲ” ಎಂದು ಸಂತ್ರಸ್ತರೊಬ್ಬರು ನೋವು ತೋಡಿಕೊಂಡಿದ್ದಾರೆ.

ಅಸ್ಸಾಂನ ಬಾರ್ಪೇಟಾ ಜಿಲ್ಲೆ ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಸುಮಾರು 1,40,000 ಜನರ ಮೇಲೆ ಪ್ರಭಾವ ಬೀರಿದೆ. ಇಲ್ಲಿನ ಸುಮಾರು 179 ಗ್ರಾಮಗಳು ಮುಳುಗಿವೆ ಮತ್ತು ಸುಮಾರು 1,571.5 ಹೆಕ್ಟೇರ್ ಬೆಳೆ ನಾಶವಾಗಿದೆ. ಧುಬ್ರಿ ಜಿಲ್ಲೆಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ 775,721 ಜನರು ಬಾಧಿತರಾಗಿದ್ದು, ಪ್ರವಾಹದಿಂದ 63,490.97 ಹೆಕ್ಟೇರ್ ಬೆಳೆ ಮುಳುಗಿದೆ. 3,518 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA)ದ ಪ್ರಕಾರ, ಬ್ರಹ್ಮಪುತ್ರ ನದಿಯ ನೀರಿನ ಮಟ್ಟವು ನೇಮತಿಘಾಟ್, ಗುವಾಹಟಿ, ಗೋಲ್ಪಾರಾ ಮತ್ತು ಧುಬ್ರಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಶುಕ್ರವಾರ ಸಂಜೆ ದಿಬ್ರುಘರ್ ಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ಸುಧಾರಿಸುತ್ತಿದ್ದು, ಸರ್ಕಾರ ಎಲ್ಲರಿಗೂ ಸಹಾಯ ಮಾಡಲು ಬದ್ಧ ಎಂದು ಹೇಳಿದ್ದಾರೆ. ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಮತ್ತು ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಕೂಡ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ರಾಜ್ಯ ಸಚಿವರು ವಿವಿಧ ಜಿಲ್ಲೆಗಳಲ್ಲಿ ಬೀಡುಬಿಟ್ಟಿದ್ದಾರೆ.

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶದ ಹೆಚ್ಚಿನ ಭಾಗವು ಶುಕ್ರವಾರದವರೆಗೆ ಜಲಾವೃತವಾಗಿದ್ದು, 77 ಪ್ರಾಣಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಮೂರು ಖಡ್ಗಮೃಗಗಳು ಸೇರಿವೆ. ಅರಣ್ಯ ಇಲಾಖೆ 94 ಪ್ರಾಣಿಗಳನ್ನು ರಕ್ಷಿಸಿದ್ದು, ಅವುಗಳಲ್ಲಿ 50 ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಬಿಹಾರದಲ್ಲಿಯೂ ನದಿ ನೀರಿನ ಮಟ್ಟ ಏರಿಕೆ

ಇತ್ತ ಬಿಹಾರದಲ್ಲಿಯೂ ಮಳೆಯಾಗುತ್ತಿದ್ದು, ವಿವಿಧ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಬಂಕಾ, ಬೇಗುಸರಾಯ್, ಭಾಗಲ್ಪುರ್, ಭೋಜ್ಪುರ, ಬಕ್ಸಾರ್, ಗಯಾ, ಜೆಹಾನಾಬಾದ್, ಕೈಮೂರ್, ಕಟಿಹಾರ್, ಖಗರಿಯಾ, ಮುಂಗೇರ್, ನಳಂದ, ಪಾಟ್ನಾ, ನವಾಡಾ, ಪೂರ್ಣಿಯಾ, ಸರನ್, ಶೇಖ್ಪುರ, ಸಿವಾನ್ ಮತ್ತು ವೈಶಾಲಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜುಲೈ 4ರಿಂದ ಹಗುರ, ಮಧ್ಯಮ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Exit mobile version