Site icon Vistara News

ಅಸ್ಸಾಂ ಭೀಕರ ಪ್ರವಾಹ; ಮುಳುಗಿದ ಮನೆ ಬಿಟ್ಟು ರೈಲ್ವೆ ಹಳಿಗಳ ಮೇಲೆ ಆಶ್ರಯ ಪಡೆದ ಜನ

Assam Flood

ದಿಸ್ಪುರ್‌: ಅಸ್ಸಾಂನಲ್ಲಿ ಪ್ರವಾಹ (Assam Flood) ಪರಿಸ್ಥಿತಿ ಮುಂದುವರಿದಿದೆ. ಅದೆಷ್ಟೋ ಮನೆಗಳು, ಬೆಳೆ ಪ್ರದೇಶಗಳು, ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಅದರಲ್ಲೀಗ ಜಮುನಾಮುಖ್‌ ಜಿಲ್ಲೆಯ ಎರಡು ಹಳ್ಳಿಗಳಂತೂ ಬಹುತೇಕ ನೀರಿನಲ್ಲಿ ಮುಳುಗಿಹೋಗಿದ್ದು, ಅದರಲ್ಲಿನ 500 ಕುಟುಂಬಗಳು ತಮ್ಮ ಮನೆ ಖಾಲಿ ಮಾಡಿ, ಸಮೀಪದ ರೈಲ್ವೆ ಹಳಿಗಳ ಮೇಲೆ ತಾತ್ಕಾಲಿಕ ಆಶ್ರಯ ಪಡೆದಿವೆ. ಈ ಭಾಗದಲ್ಲಿ ರೈಲ್ವೆ ಹಳಿ ಎತ್ತರದ ಪ್ರದೇಶದಲ್ಲಿ ಹಾದು ಹೋಗಿದೆ. ಹೀಗಾಗಿ ಅದು ಪ್ರವಾಹದಲ್ಲಿ ಮುಳುಗುವುದಿಲ್ಲ ಎಂಬ ಕಾರಣಕ್ಕೆ ಜನರೆಲ್ಲ ಅದರ ಮೇಲೆ ಬೀಡುಬಿಟ್ಟಿದ್ದಾರೆ.

ಜಮುನಾಮುಖ್‌ ಜಿಲ್ಲೆಯ ಚಂಗ್ಜುರಾಯ್‌ ಮತ್ತು ಪಾಟಿಯಾ ಪಾಠರ್‌ ಎಂಬ ಹಳ್ಳಿಗಳ ಜನರು ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮನೆಗಳು ಮುಳುಗಿ ಹೋಗಿವೆ. ಜೀವ ಉಳಿಸಿಕೊಳ್ಳಲು ಅಲ್ಲಿಂದ ಹೊರಬಿದ್ದ ಜನರೆಲ್ಲ ರೈಲ್ವೆ ಹಳಿಗಳ ಮೇಲೆ ಟಾರ್ಪಲಿನ್‌ ಶೀಟ್‌ಗಳನ್ನು ಹಾಕಿ ಆಶ್ರಯ ಪಡೆದಿದ್ದಾರೆ. ಸಿಕ್ಕಾಪಟೆ ಮಳೆ, ಪ್ರವಾಹದಿಂದಾಗಿ ಅಲ್ಲೆಲ್ಲ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಜನರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ನಮಗೆ ಸ್ಥಳೀಯ ಆಡಳಿತದಿಂದ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯ ಸಹಾಯ ಸಿಗುತ್ತಿಲ್ಲ ಎಂಬುದು ಅವರ ನೋವಿನ ಮಾತುಗಳು. ಕುಡಿಯುವ ನೀರು, ಆಹಾರ ಯಾವುದೂ ಸಮರ್ಪಕವಾಗಿ ದೊರೆಯುತ್ತಿಲ್ಲ. ನಾಲ್ಕೈದು ದಿನಗಳಿಂದಲೂ ನಾವೇ ತಾತ್ಕಾಲಿಕವಾಗಿ ಶೆಲ್ಟರ್‌ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಮಳೆ ಅಬ್ಬರ; ಪ್ರವಾಹ, ಭೂಕುಸಿತಕ್ಕೆ 8 ಮಂದಿ ಸಾವು

ಅಸ್ಸಾಂ ರಾಜ್ಯಾದ್ಯಂತ ಪ್ರವಾಹ ಭೀಕರತೆ ಸೃಷ್ಟಿಸಿದೆ. ಇಲ್ಲಿನ ದಿಮಾ ಹಸಾವೋ ಜಿಲ್ಲೆಯ ಅತ್ಯಂತ ಸುಂದರ ನಗರ ಎನ್ನಿಸಿಕೊಂಡಿದ್ದ ಹ್ಯಾಫ್ಲಾಂಗ್‌ ಸಂಪೂರ್ಣ ಧ್ವಂಸಗೊಂಡಿದೆ. ಇಲ್ಲಿನ ಮನೆಗಳ ಗೋಡೆಗಳು, ರಸ್ತೆಗಳು, ಗುಡ್ಡಗಳೆಲ್ಲ ಕುಸಿದಿವೆ. ರಸ್ತೆಗೆ ನುಗ್ಗುತ್ತಿರುವ ನೀರಿನಿಂದ ಸಂಚಾರ ಸ್ಥಗಿತಗೊಂಡಿದೆ. ಅದೆಷ್ಟೋ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಹೊರಬಂದಿದ್ದಾರೆ. ಇವರೆಲ್ಲ ತಾತ್ಕಾಲಿಕವಾಗಿ ಬೇರೆ ಕಡೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅಸ್ಸಾಂ ಇತ್ತೀಚಿನ ವರ್ಷಗಳಲ್ಲೇ ಇಷ್ಟು ಭಯಂಕರ ಪ್ರಮಾಣದ ಪ್ರವಾಹವನ್ನು ಕಂಡಿರಲಿಲ್ಲ. ಇಲ್ಲಿನ 33 ಜಿಲ್ಲೆಗಳಲ್ಲಿ 29 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. 7 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದ ತತ್ತರಿಸಿದ್ದು, ಭೂಕುಸಿತ, ಪ್ರವಾಹದಿಂದಾಗಿ ಇದುವರೆಗೆ ಒಟ್ಟು 14 ಮಂದಿ ಮೃತಪಟ್ಟಿದಾರೆ. ಅಸ್ಸಾಂ ರೈಫಲ್ಸ್‌, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಗಳು ಮತ್ತು ಭಾರತೀಯ ಸೇನಾ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಅನೇಕರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: Cyclone Asani | ಆಂಧ್ರಪ್ರದೇಶ, ಒಡಿಶಾದತ್ತ ಚಂಡಮಾರುತ; ಮಳೆ-ಪ್ರವಾಹ ಎಚ್ಚರಿಕೆ ನೀಡಿದ IMD

Exit mobile version