ಗುವಾಹಟಿ : ಭೀಕರ ಪ್ರವಾಹಕ್ಕೆ ಅಸ್ಸಾಂ ಭಾಗಶಃ ಮುಳುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜನ-ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅದೆಷ್ಟೋ ಜನರು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳುವ ಜತೆ, ತಮ್ಮವರ ಪ್ರಾಣ ಉಳಿಸಿಕೊಳ್ಳಲೂ ಹೋರಾಡುತ್ತಿದ್ದಾರೆ. ಮನೆಯ ದನ-ಕರುಗಳನ್ನು, ಮತ್ತಿತರ ಸಾಕುಪ್ರಾಣಿಗಳನ್ನೂ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಮಳೆ ನಿಂತರೂ ಹನಿ ನಿಲ್ಲಲ್ಲ ಎಂಬ ಮಾತಿದೆ. ಅದರಂತೆ ಇಲ್ಲಿ ಮಳೆ ನಿಂತಿದ್ದರೂ ಅದು ಸೃಷ್ಟಿಸಿಹೋದ ಪ್ರವಾಹ ತಗ್ಗಿಲ್ಲ.
ಅಸ್ಸಾಂನಲ್ಲಿ ಕಳೆದ ವಾರವರೆಲ್ಲ ನಿರಂತರವಾಗಿ ವರುಣ ಅಬ್ಬರಿಸಿದ್ದ, ಇದರಿಂದಾಗಿ ನದಿ, ತೊರೆಗಳು ಅಪಾಯಮಟ್ಟ ಮೀರಿ ಉಕ್ಕಿ ಹರಿದಿವೆ. ಇದರ ಪರಿಣಾಮ ಸುಮಾರು 32ಕ್ಕೂ ಹೆಚ್ಚು ಜಿಲ್ಲೆಗಳ ಸಣ್ಣ ಸಣ್ಣ ಗ್ರಾಮಗಳು ಅಕ್ಷರಶಃ ನಡುಗಡ್ಡೆಯಾಗಿದ್ದವು. ಊಟ-ನೀರು ಇಲ್ಲದೆ ಜನರು ಸಂಕಷ್ಟಪಡುವಂತಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸದ್ಯಕ್ಕೆ ಅಸ್ಸಾಂನಲ್ಲಿ ಮಳೆ ನಿಂತಿದೆ. ಆದರೆ ಜನರ ಬವಣೆ ಮಾತ್ರ ತಪ್ಪಿಲ್ಲ. ಅದೆಷ್ಟೋ ಭಾಗಗಳಲ್ಲಿ ನೀರು ನಿಂತೇ ಇದೆ. ಪ್ರವಾಹದ ಬಳಿಕ ಜನರು ಮನೆಗಳಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಗ್ರಾಮಗಳು ಪ್ರವಾಹದಿಂದ ಮುಳುಗಿ ಹೋಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಪ್ರವಾಹದ ಭೀಕರತೆ ಮಧ್ಯೆ ಮನಕಲಕುವ ದೃಶ್ಯಗಳು ಕಂಡು ಬರುತ್ತಿವೆ. 5 ರಿಂದ 8 ಅಡಿಯಷ್ಟು ನೀರಿನಲ್ಲಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಮತ್ತೊಂದೆಡೆ ತುಂಬಿ ಹರಿಯುತ್ತಿರುವ ನೀರಿನಲ್ಲಿ ಒಂದಷ್ಟು ಮಂದಿ ಶವವನ್ನು ಹೊತ್ತು ಸಾಗುತ್ತಿರುವ ದೃಶ್ಯವಂತೂ ಮನಸಿಗೆ ಘಾಸಿ ಉಂಟು ಮಾಡದೇ ಇರದು. ಇನ್ನೊಂದೆಡೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನ ತುಂಬಿ ಹರಿಯುತ್ತಿರುವ ನೀರಿನಲ್ಲಿ ತೆಪ್ಪ ಮಾಡಿ ಅದರಲ್ಲಿ ಮಲಗಿಸುತ್ತಿರುವುದನ್ನು ನೋಡಬಹುದು. ಹಾಗೇ ಬಾಲಕಿಯೊಬ್ಬಳು ತನ್ನ ತಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡು ಸೊಂಟಮಟ್ಟದ ನೀರಿನಲ್ಲಿ ಹೋಗುವುದನ್ನು ಕಾಣಬಹುದು. ಇವೆಲ್ಲ ವಿಡಿಯೋ-ಫೋಟೋಗಳು ವೈರಲ್ ಆಗುತ್ತಿವೆ.
ಈಗಾಗಲೇ ಅಸ್ಸಾಂನ ಭೀಕರ ಪ್ರವಾಹದಿಂದ 127 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಲ್ಚಾರ್, ಬರ್ಪೇಟಾ. ದಾರಂಗ್, ಚಚಾರ್, ಮೊರಿಗಾನ್ ಮತ್ತು ಕರಿಮಂಗಜ್ ಜಿಲ್ಲೆಗಳಲ್ಲಿ ಪ್ರವಾಹದ ಅನಾಹುತಗಳು ಹೆಚ್ಚಾಗಿದ್ದು, ಅಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸವನ್ನ ಅಸ್ಸಾಂನ ಎನ್ಡಿಆರ್ಎಫ್ ತಂಡ ಮಾಡುತ್ತಿದೆ.
ಇದನ್ನು ಓದಿ| Assam rain: ರಣಭೀಕರ ಮಳೆಗೆ ಅಸ್ಸಾಂ ಅತಂತ್ರ, ಸಾವಿನ ಸಂಖ್ಯೆ 100ಕ್ಕೇರಿಕೆ, ಲಕ್ಷಾಂತರ ಜನರು ಬೀದಿಪಾಲು
ಅಸ್ಸಾಂನಲ್ಲಿ ಪ್ರವಾಹದಿಂದ ಇಷ್ಟೆಲ್ಲ ಅನಾಹುತಗಳು ಸಂಭವಿಸಿದರೂ ಅಸ್ಸಾಂ ಸರ್ಕಾರ ಮಾತ್ರ ಮಹಾರಾಷ್ಟ್ರದ ಶಾಸಕರ ಸುರಕ್ಷತೆ ನೋಡಿಕೊಳ್ಳುವಲ್ಲಿ ನಿರತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಹಿಮಂತಾ ಬಿಸ್ವಾ ಶರ್ಮಾ ಕೇವಲ ತೋರಿಕೆಗೆ ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಮೀಕ್ಷೆ ಮಾಡಿ ಸುಮ್ಮನಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಅವರೇನೂ ಕ್ರಮ ಕೈಗೊಳ್ಳುತ್ತಿಲ್ಲ. ಅವರ ಗಮನವೆಲ್ಲಾ ಮಹಾರಾಷ್ಟ್ರ ಶಿವಸೇನೆ ಶಾಸಕರ ಮೇಲೆಯೇ ಇದೆ ಎಂದು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: Weather Report | ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ