Site icon Vistara News

Odisha train accident: ಪೊದೆಯೊಳಗಿಂದ ಕ್ಷೀಣ ಸ್ವರ, ಹೋಗಿ ನೋಡಿದ್ರೆ ಕೈಯಲ್ಲಿ ಜೀವ ಇಟ್ಟುಕೊಂಡು ಕುಳಿತಿದ್ದ ಗಾಯಾಳು!

Assam Man alive

ಬಾಲಾಸೋರ್, ಒಡಿಶಾ: ಕಳೆ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತವು (Odisha train accident) ದೇಶವು ಇತ್ತೀಚೆಗೆ ಕಂಡ ಅತಿದೊಡ್ಡ ಅಪಘಾತವಾಗಿದೆ. 288 ಪ್ರಯಾಣಿಕರು ಮೃತಪಟ್ಟು, ಸಾವಿರಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು. ರೈಲು ಬೋಗಿಗಳ ಅವಶೇಷಗಳಡಿ ಸಿಲುಕಿದ ಶವಗಳು, ಗಾಯಾಳುಗಳನ್ನು ಹೊರ ತೆಗೆಯುವುದು ದೊಡ್ಡ ಸವಾಲಾಗಿತ್ತು. ಪರಿಹಾರ ಕಾರ್ಯಾಚರಣೆಯ ತಂಡಗಳು ಸಾಕಷ್ಟು ಪ್ರಯತ್ನಪಟ್ಟರೂ ಒಂಚೂರಾದರೂ ವ್ಯತ್ಯಾಸವಾಗುವುದು ಸಹಜ. ಎರಡು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ನಿನ್ನೆ ಸಂಜೆ 5.30 ಗಂಟೆ ಸುಮಾರಿಗೆ, ಅಪಘಾತ ಸ್ಥಳದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಸೊರೊ ಪೊಲೀಸ್ ಠಾಣೆಯ (Police Station) ಸಿಬ್ಬಂದಿಗೆ ಸಣ್ಣ ಸ್ವರವೊಂದು ಕೇಳಿಸಿದೆ. ಹೋಗಿ ನೋಡಿದರೆ, ಅಪಘಾತದಿಂದ ಉರುಳಿ ಬಿದ್ದ ಬೋಗಿಯ ಪಕ್ಕದ ಪೊದೆಯ ಮಧ್ಯದಿಂದ ಗಾಯಾಳು ಸಹಾಯಕ್ಕಾಗಿ ಮೊರೆಯಿಡುತ್ತಿದ್ದರು(assam man found alive)!

ಪೊದೆಯಿಂದ ಸಹಾಯಕ್ಕೆ ಕೂಗುತ್ತಿದ್ದ ಗಾಯಾಳು ಧ್ವನಿಯಲ್ಲಿ ಜೀವ ಇರಲಿಲ್ಲ. ತೀರಾ ಕ್ಷೀಣ ಧ್ವನಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ. ಗಾಯಗಳಿಂದ ತತ್ತರಿಸಿದ್ದ ಆ ವ್ಯಕ್ತಿಗೆ ಡಿಹೈಡ್ರೇಷನ್ ಆಗಿತ್ತು. ಎರಡು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆಯ ಕಾರ್ಯಕರ್ತರು ಎಲ್ಲ ಕಡೆ ಹುಡುಕಿ ಗಾಯಾಳುಗಳನ್ನು ಹೊರ ತೆಗೆದಿದ್ದರು. ಆದರೆ, ಬೋಗಿ ಬಿದ್ದಿದ್ದ ಪೊದೆ ಶೋಧಿಸುವುದು ಮಿಸ್ ಆಗಿತ್ತು. ಈಗ ಅಲ್ಲಿಂದಲ್ಲೇ ಗಾಯಾಳು ಸಹಾಯಕ್ಕಾಗಿ ಕೂಗುತ್ತಿದ್ದರು. ಅಪಘಾತ ಸಂಭವಿಸಿ 48 ಗಂಟೆಗಳ ಬಳಿಕವೂ ಆ ವ್ಯಕ್ತಿ ಜೀವಂತವಾಗಿದ್ದು ಆಶ್ಚರ್ಯಕರವಾಗಿತ್ತು.

ಇಂತಹ ಭೀಕರ ರೈಲು ಅಪಘಾತದ 48 ಗಂಟೆಗಳ ನಂತರ ಒಬ್ಬ ವ್ಯಕ್ತಿ ಹೇಗೆ ಜೀವಂತವಾಗಿರಬಹುದು ಎಂದು ನಮಗೆ ಆಶ್ಚರ್ಯವಾಯಿತು. ನಾವು ಸಹಾಯಕ್ಕಾಗಿ ಮೊರೆ ಇಟ್ಟೆವು. ಕೆಲವು ಸಾಮಾಜಿಕ ಕಾರ್ಯಕರ್ತರು ಸಹಾಯ ಮಾಡಿದರು. ಬಳಿಕಅ ಅವರನ್ನು ಸೊರೊದಲ್ಲಿನ ಸಮುದಾಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅವರಿಗೆ ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಮತ್ತು ಬಾಲಸೋರ್ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿ ಕೊಡಲಾಗಿದೆ ಎಂದು ಎಂದು ಸೋರೊ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾನುವಾರ ಬಾಲಾಸೋರ್ ಜಿಲ್ಲಾಸ್ಪತ್ರೆ ಆಸ್ಪತ್ರೆಗೆ ದಾಖಲು ಮಾಡಲಾದ ಈ ಗಾಯಾಳು ತನ್ನ ಹೆಸರು ದುಲಾಲ್ ಮಜುಂದಾರ್ ಎಂದು ಹೇಳಿಕೊಂಡಿದ್ದಾನೆ. 35 ವರ್ಷದ ದುಲಾಲ್, ಅಸ್ಸಾಮ್‌ನ ಇತರ ಐದು ಜನರೊಂದಿಗೆ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಇತನ ಜತೆಗೆ ಪ್ರಯಾಣಿಸುತ್ತಿದ್ದ ಐವರು ಜೀವಂತವಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಅಪಘಾತ ಸಂಭವಿಸಿದಾಗ ಅವರು ಕೊರೊಮೊಂಡಲ್ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿದ್ದರು. ದುಲಾಲ್ ಬಹುಶಃ ಹಾರಿಹೋಗಿ ಪೊದೆಯಲ್ಲಿ ಬಿದ್ದಿದ್ದಾನೆ. ಗಾಯಗೊಂಡು ಎರಡು ದಿನ ಬದುಕಿರುವುದು ಪವಾಡವೇ ಸರಿ ಎಂದು ಬಾಲಾಸೋರ್ ಜಿಲ್ಲಾ ಕೇಂದ್ರ ಆಸ್ಪತ್ರೆಯ ಡಾ.ಸುಭಜಿತ್ ಗಿರಿ ಹೇಳಿದ್ದಾರೆ.

ಇದನ್ನೂ ಓದಿ: Odisha Train Accident: ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ‘ಪ್ರೇಮ ಕವನಗಳು’ ಅನಾಥ!

ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ದುಲಾಲ್ ಅವರನ್ನು ಸೋಮವಾರ ಭುವನೇಶ್ವರದ ಏಮ್ಸ್‌ಗೆ ದಾಖಲಿಸಲಾಗಿದೆ. ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುಲಾಲ್ ಇನ್ನೂ ಆಘಾತದಲ್ಲಿದ್ದಾರೆ. ಅವರು ಮಾತನಾಡುತ್ತಲೇ ಇದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ನಿಗಾವಹಿಸಿದ್ದೇವೆ ಎಂದು ಏಮ್ಸ್‌ನ ಪಿಆರ್ಒ ರಾಜ್ ಕಿಶೋರ್ ದಾಸ್ ತಿಳಿಸಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version