Site icon Vistara News

Assembly election 2023: ಐದು ರಾಜ್ಯಗಳ ಎಲೆಕ್ಷನ್‌ನಲ್ಲಿ ಶೇ.18ರಷ್ಟು ಅಭ್ಯರ್ಥಿಗಳು ಕ್ರಿಮಿನಲ್!

Assembly election 2023, 18 percent candidates have criminal record says ADR

ನವದೆಹಲಿ: ಮಧ್ಯ ಪ್ರದೇಶ(Madhya Pradesh), ರಾಜಸ್ಥಾನ(Rajasthan0, ಛತ್ತೀಸ್‌ಗಢ(Chhattisgarh), ಮಿಜೋರಾಮ್ (Mizoram) ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು(Assembly election 2023), ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಈ ಮಧ್ಯೆ, ಅಸೋಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಪ್ರಕಾರ, ಈ ಚುನಾವಣೆಗಳಲ್ಲಿ ಸ್ಪರ್ಧಿಸಿರುವ 8054 ಅಭ್ಯರ್ಥಿಗಳ ಪೈಕಿ ಶೇ.18ರಷ್ಟು ಕ್ರಿಮಿನಲ್ ಪ್ರಕರಣಗಳನ್ನು (Criminal Case) ಎದುರಿಸುತ್ತಿದ್ದರೆ, ಶೇ.12ರಷ್ಟು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇನ್ನು, ಸರಾಸರಿ 3.36 ಕೋಟಿ ರೂ.ನಂತೆ ಶೇ.29ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಿದ್ದಾರೆ.

2023ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮೇಲೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಏಕೆಂದರೆ ಅವರು ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಹಳೆಯ ಪದ್ಧತಿಯನ್ನ ರಾಜಕೀಯ ಪಕ್ಷಗಳು ಮುಂದುವರಿಸಿಕೊಂಡು ಹೋಗುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕ್ರಿಮಿನಲ್ ಹಿನ್ನೆಲೆಯಲ್ಲಿವವರಿಗೆ ರಾಜಕೀಯ ಪಕ್ಷಗಳು ಮಣೆ ಹಾಕುವುದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ 2020ರಲ್ಲಿ ನಿರ್ದೇಶನ ನೀಡಿ, ಕ್ರಿಮಿನಲ್ ದಾಖಲೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಕಾನೂನುಬದ್ಧ ಕಾರಣಗಳನ್ನು ಒದಗಿಸಬೇಕು ಎಂದು ಹೇಳಿತ್ತು. ಆದರೆ, ರಾಜಕೀಯ ಪಕ್ಷಗಳು ಈ ನಿರ್ದೇಶನದ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪೈಕಿ ಛತ್ತೀಸ್‌ಗಢ, ಮಧ್ಯ ಪ್ರದೇಶ, ಮಿಜೋರಾಮ್ ಮತ್ತು ರಾಜಸ್ಥಾನ ರಾಜ್ಯಗಳ ಚುನಾವಣೆ ಸಂಪನ್ನವಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ಐದು ರಾಜ್ಯಗಳ ಒಟ್ಟು 679 ಕ್ಷೇತ್ರಗಳ ಚುನಾವಣಾ ಫಲಿತಾಂಶವು ಡಿಸೆಂಬರ್ 3ರಂದು ಪ್ರಕಟವಾಗಲಿದೆ.

ತೆಲಂಗಾಣದಲ್ಲಿ ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ, ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಲ್ಲಾ ಪ್ರಮುಖ ಪಕ್ಷಗಳ 24% ರಿಂದ 72% ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ 45 ಪ್ರಕರಣಗಳು, 27 ಕೊಲೆ ಯತ್ನ ಪ್ರಕರಣಗಳು ಮತ್ತು 7 ಕೊಲೆ ಪ್ರಕರಣಗಳೂ ಸೇರಿವೆ.

ಐದು ರಾಜ್ಯಗಳ ಪೈಕಿ ಮಿಜೋರಾಮ್‌ನಲ್ಲಿ ಮಾತ್ರ ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಈ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪೈಕಿ ಶೇ.30ರಿಂದ 10ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಈ ಪೈಕಿ ಯಾರ ವಿರುದ್ಧವೂ ಮಹಿಳೆ ವಿರುದ್ಧ ದೌರ್ಜನ್ಯ, ಕೊಲೆ ಯತ್ನ, ಕೊಲೆಯಂಥ ಗಂಭೀರ ಪ್ರಕರಣಗಳಿಲ್ಲ. ಹಾಗೆಯೇ, ಕಮಿನಿಷ್ಟ್ ಪಾರ್ಟಿಯ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.68 ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳು ಹೊಂದಿದ್ದು, ಈ ಪೈಕಿ ಶೇ.43 ಅಭ್ಯರ್ಥಿಗಳು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಅತಿ ಹೆಚ್ಚು ಕ್ರಿಮಿನಲ್ ಇತಿಹಾಸ ಹೊಂದಿರುವ ಅಭ್ಯರ್ಥಿಗಳನ್ನು ಹೊಂದಿದೆ(ಶೇ.48). ನಂತರದ ಸ್ಥಾನದಲ್ಲಿ ಕಾಂಗ್ರೆಸ್, ಆಲ್ ಇಂಡಿಯಾ ಮಜ್ಲೀಸ್-ಇ-ಇತ್ತೆಹಾದುಲ್ ಮುಸ್ಲೀಮ್(ಎಐಎಂಐಎಂ) ಹಾಗೂ ಭಾರತೀಯ ಜನತಾ ಪಾರ್ತಿ(ಬಿಜೆಪಿ), ಆಮ್ ಆದ್ಮಿ ಪಾರ್ಟಿ(ಆಪ್)ಗಳಿವೆ.

ಸ್ಪರ್ಧಿಸಿರುವ ಅಭ್ಯರ್ಥಿಗಳು ಪೈಕಿ ಶೇ.29ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಪ್ರತಿನಿಧಿಸುವವರ ಪೈಕಿ ಶೇ.65 ಮತ್ತು ರಾಜ್ಯ ಪಕ್ಷಗಳನ್ನು ಪ್ರತಿನಿಧಿಸುವವರ ಪೈಕ ಶೇ.52 ಅಭ್ಯರ್ಥಿಗಳು ಒಂದು ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳ ಪೈಕಿ ಶೇ.14ರಷ್ಟು ಜನರು ಕೋಟ್ಯಧಿಪತಿಗಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Telangana polls: ಚುನಾವಣೆ ಪ್ರಚಾರದ ವೇಳೆ ತೆಲಂಗಾಣದಲ್ಲಿ ಕೆಸಿಆರ್ ಪಕ್ಷದ ಸಂಸದನಿಗೆ ಚಾಕು ಇರಿತ

Exit mobile version