Site icon Vistara News

ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಟ್ಟ ಕಾಂಗ್ರೆಸ್; ಯಾರಿಗೆಲ್ಲ ಟಿಕೆಟ್?

Rahul Gandhi And Kamal Nath

Assembly Election 2023: Congress Releases 1st list of candidates for Madhya Pradesh, Chhattisgarh, Telangana

ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ಪರಿಗಣಿಸಲಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Election 2023) ದಿನಾಂಕ ನಿಗದಿಯಾಗುತ್ತಲೇ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ ಮೊದಲ ಅಭ್ಯರ್ಥಿಗಳ ಪಟ್ಟಿ (Congress Candidates List) ಬಿಡುಗಡೆ ಮಾಡಿದ್ದು, ಗೆಲ್ಲುವ ಕುದುರೆಗಳಿಗೆ ಮಣೆ ಹಾಕಿದೆ.

ಮಧ್ಯಪ್ರದೇಶದಲ್ಲಿ 144 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ, ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಅವರ ಸಹೋದರ ಲಕ್ಷ್ಮಣ್‌ ಸಿಂಗ್‌ ಅವರಿಗೆ ಚಚೌರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ನವೆಂಬರ್‌ 17ರಂದು ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕವಿದೆ. ವಿಧಾನಸಭೆಯ ಒಟ್ಟು 230 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಛತ್ತೀಸ್‌ಗಢದಲ್ಲಿ ಎಸ್‌ಟಿ ಸಮುದಾಯಗಳಿಗೆ ಮಣಿ

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ 30 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎಸ್‌ಟಿ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಪಟಾನ್‌ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್‌. ಸಿಂಗ್‌ ದೇವ್‌ ಅವರು ಅಂಬಿಕಾಪುರದಿಂದ ಕಣಕ್ಕಿಳಿದಿದ್ದಾರೆ. 30 ಅಭ್ಯರ್ಥಿಗಳ ಪೈಕಿ ಎಸ್‌ಟಿ ಸಮುದಾಯದ 14 ಅಭ್ಯರ್ಥಿಗಳು ಇದ್ದಾರೆ. ಆಡಳಿತ ವಿರೋಧಿ ಅಲೆ ಇದ್ದರೂ ಹಾಲಿ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದು ವಿಶೇಷವಾಗಿದೆ.

ಭೂಪೇಶ್‌ ಬಘೇಲ್‌

ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕದ ನಂತರ ಕಾಂಗ್ರೆಸ್‌ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ. ವಿಧಾನಸಭೆಯ 90 ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಭೂಪೇಶ್‌ ಬಘೇಲ್‌ ಮುಖ್ಯಮಂತ್ರಿಯಾಗಿದ್ದಾರೆ.

ಬಿಜೆಪಿಗೆ ಪುಟಿದೇಳುವ ಉತ್ಸಾಹ ಇದೆ. ಆದರೂ, ಇಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದೆ. ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ 17ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.

‌ತೆಲಂಗಾಣದಲ್ಲಿ 55 ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ

ತೆಲಂಗಾಣದಲ್ಲಿ 55 ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಿರುವ ಕಾಂಗ್ರೆಸ್‌, ಪಕ್ಷದ ರಾಜ್ಯಾಧ್ಯಕ್ಷ ಅನುಮುಲ ರೇವಂತ್‌ ರೆಡ್ಡಿ ಅವರು ಕೊಡಂಗಲ್‌, ಉತ್ತಮ್‌ ಕುಮಾರ್‌ ಅವರು ಹುಜೂರ್‌ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಮುಳುಗು ಕ್ಷೇತ್ರದಿಂದ ದಸರಿ ಸೀತಕ್ಕ, ಮೇದಕ್‌ ಕ್ಷೇತ್ರದಿಂದ ಮೈನಂಪಳ್ಳಿ ರೋಹಿತ್‌ ರಾವ್‌ ಕಣಕ್ಕಿಳಿದಿದ್ದಾರೆ. ರಾಜ್ಯದಲ್ಲಿ ನವೆಂಬರ್‌ 30ರಂದು ಮತದಾನ ನಡೆಯಲಿದೆ.

ರೇವಂತ್‌ ರೆಡ್ಡಿ

ಇದನ್ನೂ ಓದಿ: Assembly Election 2023: ಮದುವೆಗಳಿಗಾಗಿ ರಾಜಸ್ಥಾನ ಚುನಾವಣಾ ದಿನಾಂಕವೇ ಬದಲು!

ಭಾರತ್‌ ರಾಷ್ಟ್ರ ಸಮಿತಿ (ಮೊದಲಿನ ಟಿಆರ್‌ಎಸ್‌)ಯ ಕೆ.ಚಂದ್ರಶೇಖರ್‌ ರಾವ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಹೆಸರು ಸಂಪಾದಿಸಿರುವ ಇವರನ್ನು ಮಣಿಸಲು ಬಿಜೆಪಿ ಇನ್ನಿಲ್ಲದ ತಂತ್ರ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನೂ ಮೀರಿ ಬಿಜೆಪಿಗೆ ಬೆಂಬಲ ಸಿಗುವುದು ಕಷ್ಟಸಾಧ್ಯ. ಕಾಂಗ್ರೆಸ್‌ಗೂ ಇಲ್ಲಿ ಅಷ್ಟೇನೂ ಭರವಸೆ ಇಲ್ಲ.‌

Exit mobile version