ನವದೆಹಲಿ: ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನ (Rajasthan) ಮತ್ತು ಛತ್ತೀಸ್‌ಗಢದಲ್ಲಿ (Chhattisgarh) ಚುನಾವಣಾ ಪ್ರಚಾರ ಕಾವು ಜೋರಾಗಿದೆ(Assembly Election 2023). ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಪ್ರಚಾರದ ಭರಾಟ ನಡೆಸಿದ್ದಾರೆ. ಈ ಮಧ್ಯೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರೂ ಆಗಿರು ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Assam chief minister Himanta Biswa Sarma ) ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Congress Leader Priyanka Gandhi Vadra) ಅವರಿಗೆ ಚುನಾವಣಾ ಆಯೋಗ (Election Commission) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಇಬ್ಬರೂ ನಾಯಕರು ಅಕ್ಟೋಬರ್ 30, ಸಂಜೆ 5 ಗಂಟೆಯೊಳಗೆ ವಿವರಣೆ ನೀಡಬೇಕು ಎಂದು ತಿಳಿಸಲಾಗಿದೆ.
ಸಿಎಂ ಹಿಮಂತ್ ಬಿಸ್ವಾಸ ಶರ್ಮಾ ಹೇಳಿದ್ದೇನು?
ಕೆಲವು ದಿನಗಳ ಹಿಂದೆ ಛತ್ತೀಸ್‌ಗಢ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ ಬಿಜೆಪಿಯ ನಾಯಕ, ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದರು.
ಒಂದು ವೇಳೆ ಒಬ್ಬ ಅಕ್ಬರ್ ಆಯ್ಕೆಯಾದರೆ, ಮರಿಬೇಡಿ ಅವರು ನೂರಾರು ಅಕ್ಬರ್‌ಗಳನ್ನು ಕರೆ ತರುತ್ತಾರೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಅಕ್ಬರ್‌ಗೆ ವಿದಾಯ ಹೇಳಿ. ಇಲ್ಲದಿದ್ದರೆ ಈ ತಾಯಿ ಕೌಶಲ್ಯಾ ದೇವಿಯ ಭೂಮಿ ಅಪವಿತ್ರಗೊಳಿಸುತ್ತಾರೆ ಎಂದು ಪ್ರಚೋದನಾಕಾರಿಯಾಗಿ ಹಿಮಂತ್ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಅಕ್ಬರ್ ಅವರನ್ನು ಉದ್ದೇಶಿಸಿ ಮಾತನಾಡಿದ್ದರು. ಸಹೋದರ, ಸಹೋದರಿಯರೇ ನೀವು ಛತ್ತೀಸ್‌ಗಢ ರಾಜ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ತಾಯಿ ಕೌಶಲ್ಯ ಅವರ ಈ ಪವಿತ್ರ ಭೂಮಿಯನ್ನು ಕಾಪಾಡಿಕೊಳ್ಳಬೇಕಿದ್ದರೆ ವಿಜಯ್ ಭಯ್ಯಾ(ಬಿಜೆಪಿ ಅಭ್ಯರ್ಥಿ) ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಈ ಸುದ್ದಿಯನ್ನೂ ಓದಿ: ರಾಜಸ್ಥಾನ ಚುನಾವಣೆ; ಅಶೋಕ್ ಗೆಹ್ಲೋಟ್ ಪುತ್ರಗೆ ಇ.ಡಿ ಸಮನ್ಸ್; ಕೈ ರಾಜ್ಯಾಧ್ಯಕ್ಷರ ಮನೆಗೆ ದಾಳಿ
ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದೇನು?
ರಾಜಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವಿಷಯದ ಕುರಿತು ಮಾತನಾಡಿದರು ಎಂಬ ಕಾರಣಕ್ಕೆ ಬಿಜೆಪಿ ಅವರ ವಿರುದ್ಧ ದೂರು ನೀಡಿತ್ತು. ರಾಜಸ್ಥಾನದ ದೌಸಾ ಎಂಬಲ್ಲಿ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ಅವರು, ಇತ್ತೀಚೆಗೆ ನಾನು ಟಿವಿಯಲ್ಲಿ ಸುದ್ದಿ ನೋಡಿದೆ. ಎಷ್ಟು ಸುಳ್ಳೋ, ನಿಜವೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇವನಾರಾಯಣ ದೇಗುಲಕ್ಕೆ ಹೋಗಿದ್ದರು. ಕಾಣಿಕೆ ಪೆಟ್ಟಿಗೆಯಲ್ಲಿ ಎನ್ವೋಲಪ್ ಹಾಕಿದ್ದರು. ಅದರಲ್ಲಿ ಏನಿರಬಹದು ಎಂದು ಜನರು ಕುತೂಹಲಿಗಳಾಗಿದ್ದರು. ತೆರೆದು ನೋಡಿದಾಗ 21 ರೂಪಾಯಿ ಎಂದು ಹೇಳಿದ್ದರು.
ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ಮೋದಿ ಅವರ ವೈಯಕ್ತಿಕ ಜೀವನ ಮತ್ತು ಧಾರ್ಮಿಕ ವಿಷಯದ ಬಗ್ಗೆ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.