Site icon Vistara News

Assembly Election 2023: ಪಂಚ ರಾಜ್ಯ ಚುನಾವಣೆ; ಬಲಾಬಲ ಹೇಗಿದೆ? ಲೋಕಸಭೆಗೆ ಸೆಮಿಫೈನಲ್‌ ಏಕೆ?

5 States Election

Assembly Elections 2023: Caste May End Up Deciding Elections in 4 States

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಪರಿಗಣಿಸಲಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Election 2023) ಚುನಾವಣೆ ಆಯೋಗವು ದಿನಾಂಕ ನಿಗದಿಪಡಿಸಿದೆ. ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17, ಮಧ್ಯಪ್ರದೇಶ ನ. 17, ಮಿಜೋರಾಂ ನ. 7, ರಾಜಸ್ಥಾನ ನ. 23 ಹಾಗೂ ತೆಲಂಗಾಣದಲ್ಲಿ ನವೆಂಬರ್‌ 30ರಂದು ಮತದಾನ ನಡೆಯಲಿದೆ. ಐದೂ ರಾಜ್ಯಗಳ ಚುನಾವಣೆ ಫಲಿತಾಂಶವು ಡಿಸೆಂಬರ್‌ 3ರಂದು ಪ್ರಕಟವಾಗಲಿದೆ. ಹಾಗಾದರೆ, ಐದೂ ರಾಜ್ಯಗಳಲ್ಲಿ ಯಾರ ಸರ್ಕಾರವಿದೆ? ಚುನಾವಣೆಗಳಲ್ಲಿ ಯಾರ ಕೈ ಮೇಲಾಗಲಿದೆ? ಒಟ್ಟು ಕ್ಷೇತ್ರ ಎಷ್ಟು? ಮ್ಯಾಜಿಕ್‌ ನಂಬರ್‌ ಎಷ್ಟು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಛತ್ತೀಸ್‌ಗಢ

ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕದ ನಂತರ ಕಾಂಗ್ರೆಸ್‌ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ. ವಿಧಾನಸಭೆಯ 90 ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಭೂಪೇಶ್‌ ಬಘೇಲ್‌ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಗೆ ಪುಟಿದೇಳುವ ಉತ್ಸಾಹ ಇದೆ. ಆದರೂ, ಇಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದೆ.

ಒಟ್ಟು ಕ್ಷೇತ್ರ: 90
ಮ್ಯಾಜಿಕ್‌ ನಂಬರ್‌: 46

ಭೂಪೇಶ್‌ ಬಘೇಲ್‌

ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕವಿದೆ. ವಿಧಾನಸಭೆಯ ಒಟ್ಟು ೧೩೦ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಒಟ್ಟು ಕ್ಷೇತ್ರ: 230
ಮ್ಯಾಜಿಕ್‌ ನಂಬರ್‌: 116

ಶಿವರಾಜ್‌ ಸಿಂಗ್‌ ಚೌಹಾಣ್

ಮಿಜೋರಾಂ

ಮುಖ್ಯಮಂತ್ರಿ ಜೊರಾಮ್‌ಥಂಗ ನೇತೃತ್ವದ ಮಿಜೋ ನ್ಯಾಷನಲ್‌ ಫ್ರಂಟ್‌ (MNF) ಪಕ್ಷವು ಮಿಜೋರಾಂನಲ್ಲಿ ಬಲಿಷ್ಠವಾಗಿದೆ. ಕೇಂದ್ರದಲ್ಲಿ ಮಿಜೋ ನ್ಯಾಷನಲ್‌ ಫ್ರಂಟ್‌, ಎನ್‌ಡಿಎ ಜತೆ ಕೈಜೋಡಿಸಿದರೂ ಇಲ್ಲಿ ಬಿಜೆಪಿಯ ಒಬ್ಬರೇ ಶಾಸಕರಿದ್ದಾರೆ. ಕಾಂಗ್ರೆಸ್‌ ಕೂಡ ಮೂರನೇ ಸ್ಥಾನದಲ್ಲಿದೆ. ಕ್ರಿಶ್ಚಿಯನ್ನರೇ ಜಾಸ್ತಿ ಇರುವ ಮಿಜೋರಾಂನಲ್ಲಿ ಬಿಜೆಪಿ ಪರ ಒಲವಿಲ್ಲ. ಹಾಗಾಗಿ, ಜೊರಾಮ್‌ಥಂಗ ಅವರಿಗೆ ಈ ಬಾರಿಯೂ ಮುನ್ನಡೆ ನಿಶ್ಚಿತ ಎನ್ನಲಾಗುತ್ತಿದೆ.

ಒಟ್ಟು ಕ್ಷೇತ್ರ: 40
ಮ್ಯಾಜಿಕ್‌ ನಂಬರ್‌: 21

ರಾಜಸ್ಥಾನ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು, ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅಶೋಕ್‌ ಗೆಹ್ಲೋಟ್‌ ಹಾಗೂ ಅವರದ್ದೇ ಪಕ್ಷದ ಸಚಿನ್‌ ಪೈಲಟ್‌ ಮಧ್ಯೆ ಆಗಾಗ ಭಿನ್ನಮತ ಸ್ಫೋಟವಾಗುತ್ತದೆ. ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದು, ಈಗಾಗಲೇ ಹಲವು ಬಾರಿ ಬಂಡಾಯವೆಬ್ಬಿಸಿ, ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸಿ ವಿಫಲವಾಗಿದೆ. ಉಚಿತ ಯೋಜನೆಗಳ ಘೋಷಣೆ ಮೂಲಕ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದರೆ, ಬಿಜೆಪಿಗೆ ಮೋದಿ ನಾಮದ ಬಲವೊಂದೇ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಆಂತರಿಕ ಕಚ್ಚಾಟವೇ ಮುಳುವಾಗುವ ಸಾಧ್ಯತೆ ಇದೆ. ‌

ಅಶೊಕ್‌ ಗೆಹ್ಲೋಟ್

ಒಟ್ಟು ಕ್ಷೇತ್ರ: 200
ಮ್ಯಾಜಿಕ್‌ ನಂಬರ್‌: 101

ಇದನ್ನೂ ಓದಿ: Assembly Election 2023: 5 ರಾಜ್ಯಗಳಲ್ಲಿ ಚುನಾವಣೆ ದಿನಾಂಕ ಘೋಷಣೆ; ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲದೆ

ತೆಲಂಗಾಣ

ಭಾರತ್‌ ರಾಷ್ಟ್ರ ಸಮಿತಿ (ಮೊದಲಿನ ಟಿಆರ್‌ಎಸ್‌)ಯ ಕೆ.ಚಂದ್ರಶೇಖರ್‌ ರಾವ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಹೆಸರು ಸಂಪಾದಿಸಿರುವ ಇವರನ್ನು ಮಣಿಸಲು ಬಿಜೆಪಿ ಇನ್ನಿಲ್ಲದ ತಂತ್ರ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನೂ ಮೀರಿ ಬಿಜೆಪಿಗೆ ಬೆಂಬಲ ಸಿಗುವುದು ಕಷ್ಟಸಾಧ್ಯ. ಕಾಂಗ್ರೆಸ್‌ಗೂ ಇಲ್ಲಿ ಅಷ್ಟೇನೂ ಭರವಸೆ ಇಲ್ಲ.‌

ಕೆ. ಚಂದ್ರಶೇಖರ್‌ ರಾವ್

ಒಟ್ಟು ಕ್ಷೇತ್ರ: 119
ಮ್ಯಾಜಿಕ್‌ ನಂಬರ್‌: 60

ಲೋಕಸಭೆ ಚುನಾವಣೆಗೆ ಏಕೆ ಪ್ರಮುಖ?

2023ರ ಲೋಖಸಭೆ ಚುನಾವಣೆಗೆ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್‌ ಎಂದೇ ಹೇಳಲಾಗುತ್ತಿದೆ. ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಈ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಗಲಿದೆ. ಹಾಗೆಯೇ, ಜನರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಮುನ್ಸೂಚನೆಯು ವಿಧಾನಸಭೆ ಚುನಾವಣೆಯಲ್ಲಿಯೇ ತಿಳಿಯಲಿದೆ. ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆ.

Exit mobile version