Site icon Vistara News

Assembly Election 2023: ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಮತದಾನ ಆರಂಭ

Assembly Election 2023

Assembly Election 2023: Voting Begins In Chhattisgarh And Madhya Pradesh

ಭೋಪಾಲ್‌/ರಾಯ್‌ಪುರ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು ದೇಶಾದ್ಯಂತ ಗಮನ ಸೆಳೆದಿದ್ದು, ಇದರ ಭಾಗವಾಗಿ ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಶುಕ್ರವಾರ (ನವೆಂಬರ್‌ 17) ಮತದಾನ (Assembly Election 2023) ಆರಂಭವಾಗಿದೆ. ಛತ್ತೀಸ್‌ಗಢದಲ್ಲಿ (Chhattisgarh Assembly Election) ಎರಡನೇ ಹಾಗೂ ಕೊನೆಯ ಹಂತದಾನ ಮತದಾನ ನಡೆಯುತ್ತಿದ್ದು, ಮಧ್ಯಪ್ರದೇಶದಲ್ಲಿ (Madhya Pradesh Assembly Election) ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಶಾಂತಿಯುತ ಮತದಾನಕ್ಕಾಗಿ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬೆಳಗ್ಗೆಯಿಂದಲೇ ಜನ ಮತಗಟ್ಟೆಗಳತ್ತ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ.

ಛತ್ತೀಸ್‌ಗಢದಲ್ಲಿ ಬಿಗ್‌ ಫೈಟ್

ಛತ್ತೀಸ್‌ಗಢದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸಿವೆ. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಕರೆಯಲಾಗುತ್ತಿದೆ. ಇನ್ನು ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್‌ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ.‌

ಒಟ್ಟು ಕ್ಷೇತ್ರ: 90
ಮ್ಯಾಜಿಕ್‌ ನಂಬರ್‌: 46

ಮಧ್ಯಪ್ರದೇಶದಲ್ಲಿ ಯಾರಿಗೆ ಮಣೆ?

ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್‌ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್‌ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ.

ಒಟ್ಟು ಸ್ಥಾನ 230
ಮ್ಯಾಜಿಕ್‌ ನಂಬರ್‌ 116

ಇದನ್ನೂ ಓದಿ: Assembly polls 2023: ಛತ್ತೀಸ್‌ಗಢದಲ್ಲಿ ಶೇ.71.48, ಮಿಜೋರಾಮ್‌ನಲ್ಲಿ ಶೇ.77.83 ಮತದಾನ

ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಜನರಿಗೆ ಉಚಿತ ಕೊಡುಗೆಗಳ ಭರವಸೆಗಳು ಸಿಕ್ಕಿವೆ. ಎರಡೂ ಕಡೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆಯೇ ನೇರ ಪೈಪೋಟಿ ಇದೆ. ಹಾಗಾಗಿ, ಜನರ ಬೆಂಬಲ ಯಾರಿಗಿದೆ ಎಂಬುದರ ಕುರಿತು ಕುತೂಹಲ ಹೆಚ್ಚಾಗಿದೆ. ಈಗಾಗಲೇ ಮಿಜೋರಾಂ ವಿಧಾನಸಭೆ ಚುನಾವಣೆ ಮುಗಿದಿದೆ. ಶುಕ್ರವಾರ ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಚುನಾವಣೆ ಮುಗಿಯಲಿದೆ. ತೆಲಂಗಾಣ ಹಾಗೂ ರಾಜಸ್ಥಾನ ಚುನಾವಣೆ ಬಾಕಿ ಇದೆ. ಡಿಸೆಂಬರ್‌ 3ರಂದು ಐದೂ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version