Site icon Vistara News

ಕಾಂಗ್ರೆಸ್‌ಗೆ ತೆಲಂಗಾಣ, 3 ರಾಜ್ಯಗಳಲ್ಲಿ ಬಿಜೆಪಿ ದಿಗ್ವಿಜಯ; ಫಲಿತಾಂಶದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Assembly Election Results 2023

Assembly Election Results 2023: Congress Wins In Telangana; Three Big States For BJP

ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌, ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗಿದ್ದ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆತಿದೆ. ತೆಲಂಗಾಣದಲ್ಲಿ ಬಿಆರ್‌ಎಸ್‌ ಪಕ್ಷವನ್ನು ಮಣಿಸಿ, ಕಾಂಗ್ರೆಸ್‌ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದೆ. ಮತ್ತೊಂದೆಡೆ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿಯು ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದ್ದು, ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಿದೆ.

ಇದರೊಂದಿಗೆ ಕಾಂಗ್ರೆಸ್‌ ಎರಡು ರಾಜ್ಯಗಳಲ್ಲಿ ಸೋತು (ರಾಜಸ್ಥಾನ, ಛತ್ತೀಸ್‌ಗಢ), ಒಂದು ರಾಜ್ಯದಲ್ಲಿ (ತೆಲಂಗಾಣ) ಗೆಲುವು ಸಾಧಿಸಿದಂತಾಗಿದೆ. ಅತ್ತ ಬಿಜೆಪಿಯು ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ದೇಶದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಿಕೊಂಡಿದೆ. ಆದರೆ, ತೆಲಂಗಾಣದಲ್ಲಿ ಬಿಜೆಪಿಯ ಕಳಪೆ ಪ್ರದರ್ಶನವು ದಕ್ಷಿಣ ಭಾರತದಲ್ಲಿ ಕಮಲ ಪಾಳಯಕ್ಕೆ ಮತ್ತೊಂದು ಹಿನ್ನಡೆಯಾದಂತಾಗಿದೆ. ಆದರೂ, ಮಧ್ಯಪ್ರದೇಶದ ಜತೆಗೆ ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಗೆಲುವು ಸಾಧಿಸಿದ ಸಂತಸ ಬಿಜೆಪಿಯದ್ದಾಗಿದೆ. ಹಾಗಾದರೆ, ಚುನಾವಣೆ ಆಯೋಗದ ಮಾಹಿತಿ ಪ್ರಕಾರ ಈಗ ಯಾವ ರಾಜ್ಯದಲ್ಲಿ ಯಾವ ಪಕ್ಷದ ಮುನ್ನಡೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

ಕರ್ನಾಟಕದ ಬಳಿಕ ತೆಲಂಗಾಣದಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸುವ ಮೂಲಕ ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ಆಡಳಿತವನ್ನು ತೆಕ್ಕೆಗೆ ತೆಗೆದುಕೊಂಡಂತಾಗಿದೆ. ಚುನಾವಣೆ ಮುಗಿದ ಕೂಡಲೇ ಲಭ್ಯವಾಗಿದ್ದ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ ಹಾಗೂ ಆಡಳಿತಾರೂಢ ಬಿಆರ್‌ಎಸ್‌ ಮಧ್ಯೆ ತೀವ್ರ ಪೈಪೋಟಿ ಇದೆ ಎಂದು ಮಾತ್ರ ತಿಳಿದುಬಂದಿತ್ತು. ಆದರೆ, ತೆಲುಗು ರಾಜ್ಯದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುವುದು ಖಚಿತವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ಕರ್ನಾಟಕ ಮಾದರಿಯ ಉಚಿತ ಗ್ಯಾರಂಟಿ ಯೋಜನೆಗಳ ಭರವಸೆಯ ಪಾತ್ರವೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಪಕ್ಷಮುನ್ನಡೆ
ಕಾಂಗ್ರೆಸ್‌65
ಬಿಆರ್‌ಎಸ್‌39
ಬಿಜೆಪಿ09
ಎಐಎಂಐಎಂ05
ಸಿಪಿಐ01
ಒಟ್ಟು119
ಮ್ಯಾಜಿಕ್‌ ನಂಬರ್60

ಮಧ್ಯಪ್ರದೇಶ ಮತ್ತೆ ಬಿಜೆಪಿ ಕೈವಶ

ಮಧ್ಯಪ್ರದೇಶದಲ್ಲಿ ಆಡಳಿತವಿರೋಧಿ ಅಲೆಯ ಮಧ್ಯೆಯೂ ಬಿಜೆಪಿ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಜಾರಿಗೆ ತಂದ ಯೋಜನೆಗಳು, ಅದರಲ್ಲೂ ಹೆಣ್ಣುಮಕ್ಕಳಿಗೆ ಮಾಸಿಕ 1,250 ರೂ. ನೀಡುವ ಲಾಡ್ಲಿ ಬೆಹನಾದಂತಹ ಯೋಜನೆಗಳು ಪಕ್ಷಕ್ಕೆ ಗೆಲುವು ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ. ನರೇಂದ್ರ ಮೋದಿ ಅಲೆಯೂ ಇಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತದೆ. ಆದರೆ, ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಐದನೇ ಬಾರಿಗೆ ಸಿಎಂ ಆಗುತ್ತಾರಾ ಅಥವಾ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪಕ್ಷಮುನ್ನಡೆ
ಬಿಜೆಪಿ164
ಕಾಂಗ್ರೆಸ್63
ಬಿಎಸ್‌ಪಿ2
ಇತರೆ1
ಒಟ್ಟು230
ಮ್ಯಾಜಿಕ್‌ ನಂಬರ್116

ರಾಜಸ್ಥಾನದಲ್ಲಿ ಕಮಲ ಪಡೆಯೇ ರಾಜ

ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿದರೂ, ಹಲವು ಗ್ಯಾರಂಟಿಗಳನ್ನು ಜನರಿಗೆ ಕೊಟ್ಟರೂ, ಆಡಳಿತ ವಿರೋಧಿ ಅಲೆ ಹಾಗೂ ಆಂತರಿಕ ಕಚ್ಚಾಟದಿಂದಾಗಿ ಬಿಜೆಪಿಯೇ ಗೆಲುವಿನತ್ತ ಮುನ್ನುಗ್ಗುತ್ತಿದೆ. ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ಮುನಿಸು, ತಮ್ಮದೇ ಸರ್ಕಾರದ ವಿರುದ್ಧ ಪೈಲಟ್‌ ಆರೋಪಗಳು, ಬಿಜೆಪಿ ಪರವಾದ ಅಲೆಯಿಂದಾಗಿ ಕಾಂಗ್ರೆಸ್‌ಗೆ ಸೋಲುಂಟಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಇಲ್ಲೂ ಬಿಜೆಪಿಯು ಯಾರನ್ನು ತಂದು ಸಿಎಂ ಗಾದಿ ಮೇಲೆ ಕೂರಿಸುತ್ತದೆ ಎಂಬ ಕುತೂಹಲ ಇದೆ.

ಪಕ್ಷಮುನ್ನಡೆ
ಬಿಜೆಪಿ112
ಕಾಂಗ್ರೆಸ್71
ಸ್ವತಂತ್ರ09
ಬಿಎಸ್‌ಪಿ02
ಇತರೆ02
ಒಟ್ಟು199
ಮ್ಯಾಜಿಕ್‌ ನಂಬರ್100

ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು

ನಿರೀಕ್ಷೆಯೇ ಇಲ್ಲದ, ಮತಗಟ್ಟೆ ಸಮೀಕ್ಷೆಯ ಯಾವುದೇ ವರದಿಗಳು ಕೂಡ ಸುಳಿವು ನೀಡದೆಯೇ ಛತ್ತೀಸ್‌ಗಢದಲ್ಲಿ ಬಿಜೆಪಿಯು ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಉತ್ತಮ ಆಡಳಿತ, ಕಾಂಗ್ರೆಸ್‌ ಉಚಿತ ಗ್ಯಾರಂಟಿಗಳ ಭರವಸೆಯ ಮಧ್ಯೆಯೂ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸುತ್ತಿದೆ. ಇದು ಕಾಂಗ್ರೆಸ್‌ ಬಿಡಿ, ಬಿಜೆಪಿ ನಾಯಕರಿಗೇ ಅಚ್ಚರಿ ತರುವ ಫಲಿತಾಂಶ ಎನಿಸಿದೆ. ಬಿಜೆಪಿಯಿಂದ ಯಾರು ಸಿಎಂ ಆಗಲಿದ್ದಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಪಕ್ಷಮುನ್ನಡೆ
ಬಿಜೆಪಿ54
ಕಾಂಗ್ರೆಸ್33
ಜಿಜಿಪಿ01
ಬಿಎಸ್‌ಪಿ01
ಸಿಪಿಐ01
ಒಟ್ಟು90
ಮ್ಯಾಜಿಕ್‌ ನಂಬರ್46

ಇದನ್ನೂ ಓದಿ: Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯು 65 ಲೋಕಸಭೆ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 29 ಲೋಕಸಭೆ ಸ್ಥಾನಗಳು ಹಾಗೂ ರಾಜಸ್ಥಾನದಲ್ಲಿ 25 ಲೋಕಸಭೆ ಸ್ಥಾನಗಳು ಇವೆ. ಒಟ್ಟಾಗಿ 54 ಸ್ಥಾನಗಳಾಗುತ್ತವೆ. ಈ ಅಷ್ಟೂ ಸ್ಥಾನಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡುವ ಸಾಧ್ಯತೆ ಇದೆ. ಕಳೆದ ಸಲ ಲೋಕಸಭೆ ಚುನಾವಣೆ ನಡೆದಾಗ, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಆದರೂ ಇವೆರಡೂ ಕಡೆಗಳಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 54ರಲ್ಲಿ 53 ಸ್ಥಾನ ಗೆದ್ದಿತ್ತು. ಮಧ್ಯಪ್ರದೇಶದಲ್ಲಿ ಒಂದೇ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟು 28 ಸೀಟ್‌ಗಳನ್ನು ಗೆದ್ದಿತ್ತು. ರಾಜಸ್ಥಾನದಲ್ಲಿ 25ರಲ್ಲಿ 24 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಉಳಿದ ಒಂದು ಸ್ಥಾನ ಕೂಡ ಬಿಜೆಪಿ ಮಿತ್ರ ಪಕ್ಷದ ಪಾಲಾಗಿತ್ತು. ಈ ಬಾರಿ ರಾಜ್ಯ ಸರ್ಕಾರವೂ ಬಿಜೆಪಿಯದೇ ಆದರೆ ಮತ್ತೊಮ್ಮೆ ಅಷ್ಟೂ ಸ್ಥಾನಗಳನ್ನು ಗೆದ್ದುಕೊಳ್ಳುವುದು ಸುಲಭವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version