ನವದೆಹಲಿ: 2024ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು (Assembly Elections 2023) ಮುಗಿದಿದ್ದು, ಭಾನುವಾರ (ಡಿಸೆಂಬರ್ 3) ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ (Election Results 2023) ಪ್ರಕಟವಾಗಲಿದೆ. ಮತಗಟ್ಟೆ ಸಮೀಕ್ಷೆ ವರದಿಗಳು, ಚುನಾವಣೆಯ ಅಲೆ ಸೇರಿ ಹಲವು ದಿಸೆಯಲ್ಲಿ ಆಯಾ ರಾಜ್ಯಗಳ ನಾಯಕರು ಹಿನ್ನಡೆ-ಮುನ್ನಡೆಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಮತ ಎಣೆಕೆಗೆ ಚುನಾವಣೆ ಆಯೋಗವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಧ್ಯಾಹ್ನದ ವೇಳೆಗೆ ನಾಲ್ಕೂ ರಾಜ್ಯಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಮತಗಟ್ಟೆ ಸಮೀಕ್ಷೆಗಳು ಹೇಳುವುದೇನು?
ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಫೋಟೋ ಫಿನಿಶ್ ರಿಸಲ್ಟ್ ನಿರೀಕ್ಷಿಸಲಾಗುತ್ತಿದೆ. ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ಕಾಂಗ್ರೆಸ್, ಹೆಚ್ಚುವರಿಯಾಗಿ ತೆಲಂಗಾಣದಲ್ಲಿ ಪವರ್ ಪಡೆಯಲಿದೆ ಎಂಬುದು ಸಮೀಕ್ಷೆಗಳ ಸಾರಾಂಶ. ಇನ್ನು ರಾಜಸ್ಥಾನದಲ್ಲಿ ಇತಿಹಾಸ ಮರುಕಳಿಸಲಿದ್ದು, ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಹಾಗೆಯೇ, ಈಶಾನ್ಯ ರಾಜ್ಯದ ಮಿಜೋರಾಮ್‌ನಲ್ಲಿ ಆಡಳಿತಾರೂಢ ಎಂಎನ್ಎಫ್ ಕಡೆಗೆ ಮತದಾರರ ಒಲವು ಕಂಡು ಬಂದಿದ್ದು, ಅತಂತ್ರ ವಿಧಾನಸಭೆಯನ್ನು ಅಲ್ಲಗಳೆಯುಂತಿಲ್ಲ ಎನ್ನುತ್ತಿವೆ ಎಕ್ಸಿಟ್ ಪೋಲ್‌ಗಳು.
ರಾಜ್ಯಗಳಲ್ಲಿ ಲೆಕ್ಕಾಚಾರ ಹೇಗಿದೆ? ರೇಸ್‌ನಲ್ಲಿರುವ ಪಕ್ಷಗಳು ಯಾವವು?
ಮಧ್ಯಪ್ರದೇಶ
ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ. ರಾಜ್ಯದಲ್ಲಿ ಶೇ.71ರಷ್ಟು ಮತದಾನವಾಗಿದೆ.
ಒಟ್ಟು ಸ್ಥಾನ 230
ಮ್ಯಾಜಿಕ್ ನಂಬರ್ 116
ರಾಜಸ್ಥಾನದ
ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ. ರಾಜಸ್ಥಾನದಲ್ಲಿ ಶೇ.75ರಷ್ಟು ಮತದಾನ ನಡೆದಿದೆ.
ಒಟ್ಟು ಕ್ಷೇತ್ರ: 200
ಮ್ಯಾಜಿಕ್ ನಂಬರ್: 101
ಛತ್ತೀಸ್‌ಗಢ
ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ. ಇದರಿಂದಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿದೆ. ಛತ್ತೀಸ್‌ಗಢದಲ್ಲಿ ಶೇ.68ರಷ್ಟು ಮತದಾನ ದಾಖಲಾಗಿದೆ.
ಒಟ್ಟು ಕ್ಷೇತ್ರ: 90
ಮ್ಯಾಜಿಕ್ ನಂಬರ್: 46
ಇದನ್ನೂ ಓದಿ: ಮತಗಟ್ಟೆ ಸಮೀಕ್ಷೆ; ಇದಕ್ಕೂ ಮೊದಲಿನ ಸಮೀಕ್ಷೆಗಳು ಏನು ಹೇಳಿದ್ದವು? ಫಲಿತಾಂಶ ಏನಾಗಿತ್ತು?
ತೆಲಂಗಾಣ
ತೆಲಂಗಾಣದಲ್ಲೂ ಸರ್ಕಾರ ರಚನೆಗೆ ಹಲವು ಕಸರತ್ತು ನಡೆಸಲಾಗಿದ್ದು, ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ತೆಲಂಗಾಣದಲ್ಲಿ ಬಿಆರ್‌ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಫೈಟ್ ಇದೆ. ಅತ್ತ, ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ಹ್ಯಾಟ್ರಿಕ್ ಕನಸು ಚಿಗುರೊಡೆದಿದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸುವ ನಿರೀಕ್ಷೆ ಇದೆ.
ಒಟ್ಟು ಕ್ಷೇತ್ರ 119
ಮ್ಯಾಜಿಕ್ ನಂಬರ್ 60
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ