ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಿಸದೆ ರಾಜಸ್ಥಾನದಲ್ಲಿ (Rajasthan) ಕೂಡ ಚುನಾವಣೆ (Rajasthan Election Result) ಗೆದ್ದಿದೆ. ಅದರಲ್ಲೂ, ಆಡಳಿತಾರೂಢ ಕಾಂಗ್ರೆಸ್‌ಅನ್ನು ಸೋಲಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹಾಗಾದರೆ, ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಹೇಗೆ? ಅವರ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಏನು ಎಂಬುದರ ಮಾಹಿತಿ ಹೀಗಿದೆ…
1. ನರೇಂದ್ರ ಮೋದಿ ಫ್ಯಾಕ್ಟರ್
ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೆಚ್ಚಿದೆ ಎಂಬುದಕ್ಕೆ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿರುವುದೇ ಸಾಕ್ಷಿಯಾಗಿದೆ. ರಾಜಸ್ಥಾನದಲ್ಲಿ ನರೇಂದ್ರ ಮೋದಿ ಅವರು 15 ರ‍್ಯಾಲಿ, ಎರಡು ರೋಡ್ ಶೋಗಳನ್ನು ನಡೆಸುವ ಮೂಲಕ ಜನರ ವಿಶ್ವಾಸ ಗಳಿಸಿದರು. ಇದು ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು.
2. ಆಂತರಿಕ ಬಿಕ್ಕಟ್ಟು ಶಮನ
ರಾಜಸ್ಥಾನದಲ್ಲಿ ಚುನಾವಣೆಗೂ ಮುನ್ನ ಆಂತರಿಕ ಬಿಕ್ಕಟ್ಟು ಶಮನಗೊಳಿಸಿದ್ದು ಬಿಜೆಪಿಗೆ ವರದಾನವಾಯಿತು. ಅದರಲ್ಲೂ, ವಸುಂಧರಾ ರಾಜೆ ಅವರ ಮನವೊಲಿಕೆ, ಅವರ ಆಪ್ತರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯು ಆಂತರಿಕ ಬಿಕ್ಕಟ್ಟು ಶಮನಗೊಳಿಸಲಾಯಿತು. ಇದರಿಂದ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಶ್ರಮಿಸಲು ಸಾಧ್ಯವಾಯಿತು ಎಂದು ವಿಶ್ಲೇಷಿಸಲಾಗಿದೆ.
3. ಕಾಂಗ್ರೆಸ್ ಭಿನ್ನಮತ
ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಅವರ ಒಳಜಗಳಗಳು ಕೂಡ ಬಿಜೆಪಿ ಗೆಲುವಿಗೆ ಕಾರಣವಾದವು ಎನ್ನಲಾಗಿದೆ. ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಸಚಿನ್ ಪೈಲಟ್ ಮಾಡಿದ ಆರೋಪಗಳು, ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಕೊನೆಯ ಕ್ಷಣದಲ್ಲಿ ಪ್ರಯತ್ನಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಸಮಯ ಮೀರಿತ್ತು.
ಇದನ್ನೂ ಓದಿ: Telangana Election Results: ತೆಲಂಗಾಣದಲ್ಲೂ ಕಾಂಗ್ರೆಸ್‌ಗೆ ‘ಗ್ಯಾರಂಟಿ’ ವರದಾನ; ಗೆಲುವಿನ ಸೋಪಾನ
4. ಆಡಳಿತ ವಿರೋಧಿ ಅಲೆ
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯು ಕೂಡ ಬಿಜೆಪಿಗೆ ನೆರವಾಯಿತು ಎಂದು ತಿಳಿದುಬಂದಿದೆ. ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಬೇಕು ಎಂದು ಸಚಿನ್ ಪೈಲಟ್ ಅವರೇ ಆಗ್ರಹಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಸುದ್ದಿಯಾಗಿದ್ದು ಸೇರಿ ಹಲವು ಪ್ರಕರಣಗಳು ಸರ್ಕಾರದ ಮೇಲೆ ಜನ ಇಟ್ಟ ಭರವಸೆಗಳು ಮಾಯವಾಗಲು ಕಾರಣವಾದವು ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023