Site icon Vistara News

Assembly Elections: 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ; ಇಲ್ಲಿದೆ ವಿವರ

Assembly Elections

Assembly Elections 2024: ECI Announces Dates For All 4 states Assembly Polls

ನವದೆಹಲಿ: ಚುನಾವಣೆ ಆಯೋಗವು (Election Commission Of India) ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ (Assembly Elections) ದಿನಾಂಕಗಳನ್ನೂ ಘೋಷಿಸಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ಒಡಿಶಾ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಲಾಗಿದೆ. ಹಾಗಾದರೆ, ನಾಲ್ಕೂ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ಚುನಾವಣೆ ನಡೆಯುವುದು ಯಾವಾಗ? ಫಲಿತಾಂಶ ಯಾವಾಗ ಸೇರಿ ಹಲವು ಮಾಹಿತಿ ಇಲ್ಲಿದೆ.

ಆಂಧ್ರಪ್ರದೇಶ

ಆಂಧ್ರಪ್ರದೇಶದಲ್ಲಿ ಒಂದೇ ಹಂತದಲ್ಲಿ ಮೇ 13ರಂದು ಮತದಾನ ನಡೆಯಲಿದೆ. ರಾಜ್ಯದ 175 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲೀಗ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿದ್ದು, ಈ ಬಾರಿಯೂ ವೈಎಸ್‌ಆರ್‌ಸಿಪಿ ಹಾಗೂ ಟಿಡಿಪಿ ಮಧ್ಯೆ ತೀವ್ರ ಪೈಪೋಟಿ ಇದೆ. 2019ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಕ್ಷೇತ್ರ, ಟಿಡಿಪಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕಾಂಗ್ರೆಸ್‌ ಹಾಗೂ ಬಿಜೆಪಿ ಶೂನ್ಯ ಸಾಧನೆ ಮಾಡಿದ್ದವು.

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್‌ 19ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಒಟ್ಟು 60 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಸದ್ಯ, ಬಿಜೆಪಿಯ ಪೆಮಾ ಖಂಡು ಅವರು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇದೆ.

ಒಡಿಶಾ

ಒಡಿಶಾದಲ್ಲಿ ಮೇ 13 ಹಾಗೂ ಮೇ 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 147 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಜು ಜನತಾ ದಳ (BJD) ಮುಖ್ಯಸ್ಥ ನವೀನ್‌ ಪಟ್ನಾಯಕ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ಬಿಜೆಡಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ಕಾಂಗ್ರೆಸ್‌ ಇಲ್ಲಿ 9 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಬಿಜೆಪಿ 23, ಬಿಜೆಡಿ 112 ಕ್ಷೇತ್ರಗಳಲ್ಲಿ ಗೆದ್ದಿದ್ದವು.

ಸಿಕ್ಕಿಂ

ಸಿಕ್ಕಿಂನ ಒಟ್ಟು 32 ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಪ್ರೇಮ್‌ ಸಿಂಗ್‌ ತಮಾಂಗ್‌ ಈಗ ಸಿಎಂ ಆಗಿದ್ದಾರೆ. ಇಲ್ಲಿ ಕ್ರಾಂತಿಕಾರಿ ಮೋರ್ಚಾ ಹಾಗೂ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ ಮಧ್ಯೆ ನೇರ ಕಾಳಗ ಇದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆ; 7 ಹಂತದಲ್ಲಿ ಎಲೆಕ್ಷನ್, ಏಪ್ರಿಲ್‌ 19ರಿಂದ ಮತದಾನ, ರಿಸಲ್ಟ್‌ ಯಾವಾಗ?

26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ

13 ರಾಜ್ಯಗಳ 26 ವಿಧಾನಸಭೆ ಕ್ಷೇತ್ರಗಳಿಗೂ ಚುನಾವಣೆ ಆಯೋಗವು ಉಪ ಚುನಾವಣೆ ಘೋಷಿಸಿದೆ. ಲೋಕಸಭೆ ಚುನಾವಣೆ ನಡೆಯುವ ದಿನಾಂಕದಂದೇ ಆಯಾ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ಸುರಪುರ (ಎಸ್‌ಟಿ ಮೀಸಲು) ವಿಧಾನಸಭೆ ಕ್ಷೇತ್ರದಲ್ಲಿ ಮೇ 7ರಂದು ಉಪ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಒಂದೇ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಲೋಕಸಭೆ, ವಿಧಾನಸಭೆ ಹಾಗೂ ಉಪ ಚುನಾವಣೆ ಫಲಿತಾಂಶವು ಜೂನ್‌ 4ರಂದು ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version