Site icon Vistara News

Rajasthan Election 2023: ರಾಜಸ್ಥಾನದಲ್ಲಿ ರಾಜೆಗೆ ಬಿಎಸ್‌ವೈ ಸ್ಥಿತಿ? ಮಧ್ಯಪ್ರದೇಶದಲ್ಲೂ ಬಿಜೆಪಿ ಪ್ರಯೋಗ!

Assembly Elections 2023

Assembly Elections 2024: Will Vasundhara Raje Become Another BSY? BJP Coins A New Experiment In Madhya Pradesh

ಜೈಪುರ/ಭೋಪಾಲ್:‌ ಮುಂದಿನ ತಿಂಗಳು ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಇದರ ಬೆನ್ನಲ್ಲೇ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ನಡೆಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಆಪ್ತರಿಗೆ ಟಿಕೆಟ್‌ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ, ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆಗೆ ಸರಿಸಿದಂತೆ, ವಸುಂಧರಾ ರಾಜೆ ಅವರನ್ನೂ ಬಿಜೆಪಿ ಹೈಕಮಾಂಡ್‌ ತೆರೆಗೆ ಸರಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ರಾಜಸ್ಥಾನದಲ್ಲಿ ಬಿಜೆಪಿಯು 41 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ಏಳು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಆದರೆ, ಹಾಲಿ ಶಾಸಕರು, ವಸುಂಧರಾ ರಾಜೆ ಅವರ ಆಪ್ತರಾದ ನರ್ಪತ್‌ ಸಿಂಗ್‌ ರಾಜ್ವೀ ಹಾಗೂ ರಾಜಪಾಲ್‌ ಸಿಂಗ್‌ ಶೇಖಾವತ್‌ ಸೇರಿ ಹಲವರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ವಸುಂಧರಾ ರಾಜೆ ಅವರನ್ನು ಕಡೆಗಣಿಸುತ್ತಿದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಮೆರೆಗೆ ಸರಿಸಿದಂತೆಯೇ ರಾಜೆ ಅವರನ್ನೂ ಈ ಬಾರಿ ತೆರೆಗೆ ಸರಿಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಝೋತ್ವಾರ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ರಾಜ್ಯವರ್ಧನ್ ರಾಥೋಡ್ ಮತ್ತು ವಿದ್ಯಾಧರ್ ನಗರದಿಂದ ಸಂಸದೆ ದಿಯಾ ಕುಮಾರಿ ಅವರನ್ನು ಬಿಜೆಪಿ ವಿಧಾನಸಭೆ ಚುನಾವಣೆ ಕಣಕ್ಕಿಳಿಸಲಿದೆ. ಇದೇ ವೇಳೆ, ಬಾಬಾ ಬಾಲಕನಾತ್ ಅವರು ತಿಜರಾ ಮತ್ತು ಕಿರೋಡಿ ಲಾಲ್ ಮೀನಾ ಅವರು ಸವಾಯಿ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನವೆಂಬರ್ 23ರಂದು ರಾಜಸ್ಥಾನ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಮಧ್ಯಪ್ರದೇಶದಲ್ಲೂ ಬಿಜೆಪಿ ಪ್ರಯೋಗ

ಮಧ್ಯಪ್ರದೇಶದಲ್ಲೂ ಬಿಜೆಪಿ ಹಲವು ಪ್ರಯೋಗ ಮಾಡಿದೆ. ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ಮೂರು ಪಟ್ಟಿಯನ್ನು ರಿಲೀಸ್ ಮಾಡಿತ್ತು. ಇದೀಗ ಸೋಮವಾರ ನಾಲ್ಕನೇ ಪಟ್ಟಿಯನ್ನು ರಿಲೀಸ್ ಮಾಡದ್ದು, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಅವರು ಬದ್ನಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದರೆ, ಆಡಳಿತ ವಿರೋಧಿ ಅಲೆಯ ಮಧ್ಯೆಯೂ ಬಿಜೆಪಿಯು 24 ಸಚಿವರಿಗೆ ಟಿಕೆಟ್‌ ನೀಡಿರುವುದು ಅಚ್ಚರಿ ಮೂಡಿಸಿದೆ.

ಆಡಳಿತ ವಿರೋಧಿ ಅಲೆ ಇದೆ. ಹೊಸ ಮುಖಗಳಿಗೆ ಮಣೆ ಹಾಕಿದರೆ ಮಾತ್ರ ಜನರ ಬೆಂಬಲ ಬಿಜೆಪಿಗೆ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ 24 ಸಚಿವರಿಗೆ ಮತ್ತೆ ಟಿಕೆಟ್‌ ನೀಡಿರುವುದು ಯುವ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇಲ್ಲೂ ಮೊದಲ ಪಟ್ಟಿಯಲ್ಲಿ ಏಳು ಸಂಸದರಿಗೆ ಟಿಕೆಟ್‌ ನೀಡಿರುವುದು ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ: Assembly Election 2023: ಪಂಚ ರಾಜ್ಯ ಚುನಾವಣೆ; ಬಲಾಬಲ ಹೇಗಿದೆ? ಲೋಕಸಭೆಗೆ ಸೆಮಿಫೈನಲ್‌ ಏಕೆ?

ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧೆ?

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಕಣ್ಣುಗಳು ಮಧ್ಯಪ್ರದೇಶ ಮುಖ್ಯಮಂತ್ರಿ ಹುದ್ದೆ ಮೇಲಿದ್ದು, ಅವರು ಕೂಡ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಟಿಕೆಟ್‌ ಪಡೆದ ಬಹುತೇಕ ಸಚಿವರು ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತರಾಗಿದ್ದು, ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದರೆ ರಾಜ್ಯ ರಾಜಕಾರಣದಲ್ಲಿ ಒಂದು ಕೈ ನೋಡಬೇಕು ಎಂಬುದು ಸಿಂಧಿಯಾ ಗುರಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Exit mobile version