Site icon Vistara News

Assembly polls 2023: ಛತ್ತೀಸ್‌ಗಢದಲ್ಲಿ ಶೇ.71.48, ಮಿಜೋರಾಮ್‌ನಲ್ಲಿ ಶೇ.77.83 ಮತದಾನ

Assembly polls 2023, Chhattisgarh 71.48 and mizoram records 77.83 per cent voting

ನವದೆಹಲಿ: ಪಂಚ ರಾಜ್ಯಗಳ ಪೈಕಿ (Assembly polls 2023) ಛತ್ತೀಸ್‌ಗಢ (Chhattisgarh) ಮತ್ತು ವಿಜೋರಾಮ್ (mizoram) ರಾಜ್ಯದಲ್ಲಿ ನ.7, ಮಂಗಳವಾರ ಮತದಾನ ನಡೆಯಿತು. ಮಾವೋವಾದಿಗಳ ದಾಳಿಗೆ ಸಾಕ್ಷಿಯಾದ ಛತ್ತೀಸ್‌ಗಢದಲ್ಲಿ ಶೇ.71.48 ಹಾಗೂ ಈಶಾನ್ಯ ರಾಜ್ಯ ಮಿಜೋರಾಮ್‌ನಲ್ಲಿ ಶೇ.77.83ರ ಮತದಾನ ನಡೆದಿದೆ.

ಮಿಜೋರಾಂನಲ್ಲಿ 8,52,088 ಮತದಾರರು ನೋಂದಾಯಿಸಿದ್ದರೆ, ಛತ್ತೀಸ್‌ಗಢದಲ್ಲಿ 40,78,680 ಮತದಾರರು ನೋಂದಾಯಿಸಿಕೊಂಡಿದ್ದಾರೆ. ದೂರದ ಪ್ರದೇಶಗಳು ಸೇರಿದಂತೆ ಎಲ್ಲಾ ಮತಗಟ್ಟೆಗಳ ವರದಿಗಳು ಬಂದ ನಂತರ ಮತದಾನದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾನದ ಅವಧಿ ಮುಗಿಯುವುದರೊಳಗೆ ಮತಗಟ್ಟೆಗಳಿಗೆ ಆಗಮಿಸಿದ ಮತದಾರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಮಾವೋವಾದಿ ಪೀಡಿತ ಬಸ್ತಾರ್ ವಿಭಾಗದ ವ್ಯಾಪ್ತಿಗೆ ಬರುವ ಹಲವು ಕ್ಷೇತ್ರಗಳು ಸೇರಿದಂತೆ ಛತ್ತೀಸ್‌ಗಢದ 20 ಸ್ಥಾನಗಳಿಗೆ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿತು. ಕಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ನ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಘಟಕದ ಅಧಿಕಾರಿಯೊಬ್ಬರು ಮೊದಲ ಘಟನೆಯಲ್ಲಿ ಗಾಯಗೊಂಡಿದ್ದರೆ, ಎರಡನೇ ಘಟನೆಯ ವರದಿಗಳಲ್ಲಿ ಮಾವೋವಾದಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಛತ್ತೀಸ್‌ಗಢ ಕಾಂಗ್ರೆಸ್ ಮುಖ್ಯಸ್ಥ ಮತ್ತು ಸಂಸದ ದೀಪಕ್ ಬೈಜ್ (ಚಿತ್ರಕೋಟ್), ಸಚಿವರಾದ ಕವಾಸಿ ಲಖ್ಮಾ (ಕೊಂಟಾ), ಮೋಹನ್ ಮಾರ್ಕಮ್ (ಕೊಂಡಗಾಂವ್) ಮತ್ತು ಮೊಹಮ್ಮದ್ ಅಕ್ಬರ್ (ಕವರ್ಧಾ) ಹಾಗೂ ಛವೀಂದ್ರ ಕರ್ಮ (ದಂತೇವಾಡ) ಸೇರಿದ್ದಾರೆ.

ಮಿಜೋರಾಂನಲ್ಲಿ ಎಂಎನ್‌ಎಫ್, ಕಾಂಗ್ರೆಸ್ ಮತ್ತು ಜೋರಾಮ್ಸ್ ಪೀಪಲ್ ಮೂವ್‌ಮೆಂಟ್ ಎಲ್ಲಾ 40 ಕ್ಷೇತ್ರಗಳಲ್ಲಿ ಹೋರಾಡುತ್ತಿದ್ದರೆ, ಬಿಜೆಪಿ, ಎಎಪಿ ಮತ್ತು ಸ್ವತಂತ್ರರು ಕ್ರಮವಾಗಿ 23, 4 ಮತ್ತು 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಿಜೋರಾಂನ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆದರೆ, ಛತ್ತೀಸ್‌ಗಢದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ 20 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಛತ್ತೀಸಗಡ 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈಶಾನ್ಯ ರಾಜ್ಯದಲ್ಲಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರೆ, ಛತ್ತೀಸ್‌ಗಢದಲ್ಲಿ 223 ನಾಯಕರು ಸ್ಪರ್ಧಿಸಿದ್ದಾರೆ. ಡಿಸೆಂಬರ್ 3ರಂದು ಫಲಿತಾಂಶವು ಪ್ರಕಟವಾಗಲಿದೆ.

ಈ ಸುದ್ದಿಯನ್ನೂ ಓದಿ: ಛತ್ತೀಸ್‌ಗಢದಲ್ಲಿ ಇಂದು ಮತದಾನ; ಬಿಜೆಪಿ-ಕಾಂಗ್ರೆಸ್ ಪ್ಲಸ್-ಮೈನಸ್ ಏನೇನು?‌ ಯಾರಿಗೆ ಮೇಲುಗೈ?

Exit mobile version