Site icon Vistara News

Photos: ಅರಬ್ಬಿ ಸಮುದ್ರದಲ್ಲಿ ರುದ್ರ ಬಿರುಗಾಳಿ; ಆಕಾಶದಿಂದ ಬಿಪರ್​ಜಾಯ್​ ಫೋಟೋ ಸೆರೆಹಿಡಿದ ಗಗನಯಾತ್ರಿ ​

ಭಾರತದ ಗುಜರಾತ್​​​ಗೆ ಇಂದು ಸಂಜೆ ಹೊತ್ತಿಗೆ ಬಿಪರ್​ಜಾಯ್ ಚಂಡಮಾರುತ (Cyclone Biparjoy) ಅಪ್ಪಳಿಸಲಿದ್ದು, ಭೂಕುಸಿತದ ಆತಂಕ ಎದುರಾಗಿದೆ. ಗುಜರಾತ್​ ಕರಾವಳಿ ತೀರದ (Gujarat Coastal) ಸ್ಥಳಗಳಲ್ಲಿ ವಾಸವಾಗಿದ್ದ ಸುಮಾರು 74 ಸಾವಿರ ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಐದು ಶತಮಾನಗಳ, ಅಬ್ಬರದ ಚಂಡಮಾರುತ ಇದಾಗಿದ್ದು, ಉಂಟಾಗಲಿರುವ ಹಾನಿಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಚಂಡಮಾರುತದ ಅಬ್ಬರಕ್ಕೆ ಕರ್ನಾಟಕ ಕರಾವಳಿಯಲ್ಲೂ ಜೂ.19ರವರೆಗೆ ಭಯಂಕರ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಅರಬ್ಬೀಸಮುದ್ರದಲ್ಲಿ ಪ್ರಕ್ಷುಬ್ಧತೆಯನ್ನು ಉಂಟು ಮಾಡಿ, ದೊಡ್ಡದೊಡ್ಡ ಅಲೆಗಳು ಏಳಲು ಕಾರಣವಾಗಿರುವ ಬಿಪರ್​ಜಾಯ್​ ಚಂಡಮಾರುತದ ಚಿತ್ರವನ್ನು ಗಗನಯಾತ್ರಿ ಸುಲ್ತಾನ್ ಅಲ್ನೆಯಾಡಿ ಎಂಬುವರು ಬಾಹ್ಯಾಕಾಶದಿಂದ ಸೆರೆಹಿಡಿದಿದ್ದಾರೆ. ಬಿಪರ್​ಜಾಯ್​ ಚಂಡಮಾರುತ ಅರಬ್ಬಿಸಮುದ್ರದ ಮೇಲೆ ಉಂಟು ಮಾಡಿರುವ ಸನ್ನಿವೇಶವನ್ನು ಈ ಫೋಟೋ ಬಿಚ್ಚಿಟ್ಟಿದೆ. ಸಾಗರದಲ್ಲಿ ಬಿಪರ್​ಜಾಯ್​ ಚಂಡಮಾರುತ ಉಂಟು ಮಾಡಿರುವ ಸುರುಳಿಯಾಕಾರವನ್ನು ತೋರಿಸಲಾಗಿದೆ. ಗಗನಯಾತ್ರಿ ಸುಲ್ತಾನ್ ಅಲ್ನೆಯಾಡಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಎರಡು ದಿನಗಳ ಹಿಂದೆ ಈ ಫೋಟೋ ತೆಗೆದಿದ್ದಾರೆ ಎನ್ನಲಾಗಿದೆ.

ಬಾಹ್ಯಾಕಾಶದಿಂದ ಚಿತ್ರೀಕರಿಸಲಾದ ಬಿಪರ್​ಜಾಯ್​ ಚಿತ್ರ

ಇದನ್ನೂ ಓದಿ: Weather Report : ಬಿಪರ್‌ ಜಾಯ್‌ ಎಫೆಕ್ಟ್;‌ ಕರಾವಳಿಯಲ್ಲಿ ಭಾರಿ ಮಳೆ ನಿರೀಕ್ಷೆ, 5 ದಿನ ಸಮುದ್ರಕ್ಕೆ ಇಳೀಬೇಡಿ

ಅಂದಹಾಗೇ, ಈ ಬಿಪರ್​ಜಾಯ್ ಚಂಡಮಾರುತವು 2023ರ ಜೂನ್ 6ರಂದು ಅರೇಬಿಯನ್​ ಸಮುದ್ರದಲ್ಲಿ ಎದ್ದಿದೆ. ಗಾಳಿಯವ ವೇಗ ಗಂಟೆಗೆ 125 ಕಿಮೀನಷ್ಟು ತೀವ್ರವಾಗಿದ್ದು, ಗಂಟೆಗೆ 15 ಕಿಮೀ ವೇಗದಲ್ಲಿ ವಾಯುವ್ಯದ ಕಡೆಗೆ ಚಲಿಸುತ್ತಿದೆ. ಇಂದು ಗುಜರಾತ್​ಗೆ ಅಪ್ಪಳಿಸಲಿದ್ದು, ಗಾಳಿಯ ತೀವ್ರತೆ ಗಂಟೆಗೆ 135 ಕಿಮೀವರೆಗೂ ತಲುಪಲಿದೆ. ಗುಜರಾತ್​ ಕರಾವಳಿಯಲ್ಲಿ ಭಾರಿ ಗಾಳಿ-ಮಳೆ, ಭೂಕುಸಿತ ಉಂಟಾಗುವ ಎಚ್ಚರಿಕೆಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಕೆ, ಗುಜರಾತ್​​ನ ಕಚ್​​, ಸೌರಾಷ್ಟ್ರದಲ್ಲೆಲ್ಲ ರೆಡ್​ ಅಲರ್ಟ್ ಘೋಷಣೆ ಮಾಡಿದೆ.

ಬಿಪರ್​ಜಾಯ್​ ಸೈಕ್ಲೋನ್​ನ ಫೋಟೋ
Exit mobile version