Site icon Vistara News

ಭಾರತ ಈ ವರ್ಷ 7.5% ಬೆಳವಣಿಗೆ, ಅತಿ ವೇಗದ ಆರ್ಥಿಕತೆ: ನರೇಂದ್ರ ಮೋದಿ

Narendra Modi

ನವ ದೆಹಲಿ: ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆ 7.5%ದಷ್ಟು ಆಗುವ ನಿರೀಕ್ಷೆಯಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ತಂತ್ರಜ್ಞಾನ ನೇತೃತ್ವದ ಬೆಳವಣಿಗೆ, ಉದ್ಯಮಸ್ನೇಹಿ ಆಡಳಿತ ಮತ್ತು ಡಿಜಿಟಲ್ ವಲಯದಲ್ಲಿ ಸರ್ಕಾರದ ಉಪಕ್ರಮಗಳ ಹಿನ್ನೆಲೆಯಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಹೇಳಿದರು. ಬುಧವಾರ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಬ್ಯುಸಿನೆಸ್ ಫೋರಂನ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಬ್ರಿಕ್ಸ್‌ ಸಮಾವೇಶಕ್ಕೆ ಒಂದು ದಿನ ಮೊದಲು ಇದು ನಡೆಯುತ್ತಿದೆ.

ಕೋವಿಡ್ ನಂತರದ ಆರ್ಥಿಕ ಚೇತರಿಕೆಯತ್ತ ಜಗತ್ತು ಗಮನಹರಿಸಿದೆ. ಈಗ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪಾತ್ರವು ಮಹತ್ವದ್ದಾಗಿದೆ. ಈ ವರ್ಷ ನಾವು 7.5% ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ. ಇದು ನಮ್ಮನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮಾಡಲಿದೆ. ಉದಯೋನ್ಮುಖ ನವಭಾರತದಲ್ಲಿ ಪ್ರತಿ ವಲಯದಲ್ಲಿಯೂ ಪರಿವರ್ತನೆಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ 10 ಯೋಗ ಸತ್ಯಗಳು

ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಭಾರತವು “ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರ” ಎಂಬ ಮಂತ್ರವನ್ನು ಅಳವಡಿಸಿಕೊಂಡಿದೆ. ಈ ವಿಧಾನದ ಫಲಿತಾಂಶಗಳು ಧನಾತ್ಮಕವಾಗಿವೆ. ತಂತ್ರಜ್ಞಾನ ನೇತೃತ್ವದ ಬೆಳವಣಿಗೆ, ಉದ್ಯಮಸ್ನೇಹಿತನ, ಮೂಲಸೌಕರ್ಯಗಳ ಸುಧಾರಣೆ ಮತ್ತು ಡಿಜಿಟಲ್ ರೂಪಾಂತರಗಳು ಭಾರತದ ಆರ್ಥಿಕತೆಯ ಚೇತರಿಕೆಗೆ ಕಾರಣವಾದ ನಾಲ್ಕು ಸ್ತಂಭಗಳಾಗಿವೆ ಎಂದು ಮೋದಿ ನುಡಿದರು.

ನಾವು ಪ್ರತಿ ವಲಯದಲ್ಲೂ ನಾವೀನ್ಯತೆಯನ್ನು ಬೆಂಬಲಿಸುತ್ತಿದ್ದೇವೆ. ಬಾಹ್ಯಾಕಾಶ, ನೀಲಿ ಆರ್ಥಿಕತೆ, ಹಸಿರು ಜಲಜನಕ, ಸುಸ್ಥಿರ ಇಂಧನ, ಡ್ರೋನ್‌ಗಳು, ಜಿಯೋ-ಸ್ಪೆಷಲ್ ಮತ್ತು ಡೇಟಾದಂತಹ ಹಲವು ಕ್ಷೇತ್ರಗಳಲ್ಲಿ ನಾವು ನಾವೀನ್ಯಸ್ನೇಹಿ ನೀತಿಗಳನ್ನು ರೂಪಿಸಿದ್ದೇವೆ. ಅತ್ಯುತ್ತಮ ಮೂಲಸೌಕರ್ಯಗಳಿವೆ. ಇದು ಹೆಚ್ಚುತ್ತಿರುವ ಸ್ಟಾರ್ಟ್-ಅಪ್‌ಗಳಲ್ಲಿ ಪ್ರತಿಫಲಿಸುತ್ತಿದೆ. ಭಾರತದ ಸುಮಾರು 70,000 ಸ್ಟಾರ್ಟ್‌ಅಪ್‌ಗಳಲ್ಲಿ 100ಕ್ಕೂ ಹೆಚ್ಚು ಯುನಿಕಾರ್ನ್‌ಗಳು ಎಂದರು.

ಮೂಲಸೌಕರ್ಯಗಳ ಸುಧಾರಣೆಗಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ನಮ್ಮ ರಾಷ್ಟ್ರೀಯ ಮೂಲಸೌಕರ್ಯ ವಾಹಿನಿ ಅಡಿಯಲ್ಲಿ 1.5 ಲಕ್ಷ ಕೋಟಿ ಡಾಲರ್‌ ಮೌಲ್ಯದ ಹೂಡಿಕೆ ಅವಕಾಶಗಳಿವೆ ಎಂದು ನುಡಿದರು.

ಇದನ್ನೂ ಓದಿ: Modi in Karnataka | ಮೈಸೂರು ಅರಮನೆಯಲ್ಲಿ ಮೋದಿ, ಇಲ್ಲಿವೆ ಸ್ಮರಣೀಯ ಚಿತ್ರಗಳು

Exit mobile version