Site icon Vistara News

West Bengal Explosion: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 8 ಜನ ಬಲಿ

West Bengal Explosion

At least eight killed, several injured in explosion at fireworks factory in West Bengal

ಕೋಲ್ಕೊತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ (North 24 Parganas) ಅಕ್ರಮವಾಗಿ ನಿರ್ಮಿಸಲಾಗಿದ್ದ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸ್ಫೋಟ (West Bengal Explosion) ಸಂಭವಿಸಿದ್ದು, 8 ಜನ ಮೃತಪಟ್ಟಿದ್ದಾರೆ. ತೀವ್ರ ಪ್ರಮಾಣದ ಸ್ಫೋಟದಿಂದಾಗಿ ಹಲವರು ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದವರಿಗಾಗಿ ಭಾರಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ದತ್ತಪುಕುರ್‌ ಬಳಿ ಇರುವ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ದತ್ತಪುಕುರ್‌ ವ್ಯಾಪ್ತಿಯ ನೀಲ್‌ಗುಂಜ್‌ ಪ್ರದೇಶದಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಹಲವು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 10.40ರ ಸುಮಾರಿಗೆ ತೀವ್ರ ಸ್ಫೋಟ ಸಂಭವಿಸಿದ ಕಾರಣ ಕಾರ್ಖಾನೆ ಸೇರಿ ಹಲವು ಕಟ್ಟಡಗಳು ಧ್ವಂಸಗೊಂಡಿವೆ ಎಂದು ತಿಳಿದುಬಂದಿದೆ.

ಸ್ಫೋಟದ ತೀವ್ರತೆಗೆ ಕುಸಿದ ಕಟ್ಟಡ

ದುರಂತ ಸಂಭವಿಸುತ್ತಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಟ್ಟಡದ ಚಾವಣಿಯೇ ಕುಸಿದ್ದು ಬಿದ್ದ ಕಾರಣ ಹಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಅವರನ್ನು ಹೊರತೆಗೆಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Cylinder Blast : ಡೈರಿ ಸರ್ಕಲ್‌ ಬಳಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಒಬ್ಬ ಸಾವು, ಮತ್ತಿಬ್ಬರು ಗಂಭೀರ

ಪಟಾಕಿ ತಯಾರಿಸಲು ಕಟ್ಟಡದಲ್ಲಿ ಅಕ್ರಮವಾಗಿ ಮದ್ದು ಸೇರಿ ಹಲವು ಉಪಕರಣಗಳನ್ನು ಸಂಗ್ರಹಿಸಿಡಲಾಗಿತ್ತು. ಅವುಗಳ ಸ್ಫೋಟದಿಂದಾಗಿ ಭಾರಿ ಅನಾಹುತ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Exit mobile version