Site icon Vistara News

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ ನಾಲ್ವರು ಬಲಿ; ಹಲವರು ಸಿಲುಕಿರುವ ಶಂಕೆ

Firecracker Factory

At least four people killed in explosion at firecracker factory in Uttar Pradesh's Kaushambhi

ಲಖನೌ: ಒಂದು ವಾರದ ಹಿಂದಷ್ಟೇ ತಮಿಳುನಾಡಿನ (Tamil Nadu) ಪಟಾಕಿ ಕಾರ್ಖಾನೆಯಲ್ಲಿ ದಿಢೀರ್‌ ಸ್ಫೋಟ ಸಂಭವಿಸಿ 11 ಜನ ಮೃತಪಟ್ಟಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ (Uttar Pradesh) ಭಾನುವಾರ (ಫೆಬ್ರವರಿ 25) ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ (Firecracker Factory) ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಕಾರ್ಖಾನೆಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ಇರುವ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕೌಶಂಭಿ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೇ ವೇಳೆ ಸ್ಫೋಟ ಸಂಭವಿಸಿದ ಕಾರಣ ಎಲ್ಲ ಪಟಾಕಿಗಳು ಸಿಡಿದಿವೆ. ಇದರ ತೀವ್ರತೆಗೆ ಪಟಾಕಿಯ ಸುತ್ತಲೂ ಹೊಗೆ ಆವರಿಸಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಇನ್ನೂ ಎಷ್ಟು ಕಾರ್ಮಿಕರು ಕಾರ್ಖಾನೆಯಲ್ಲಿ ಸಿಲಕಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

“ಕೌಶಂಭಿ ಜಿಲ್ಲೆಯ ಭರ್ವಾರಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಉತ್ಪಾದನೆ ಹಾಗೂ ಮಾರಾಟ ಮಾಡುವ ಪರವಾನಗಿ ಇತ್ತು. ಹೆಚ್ಚಿನ ಕಾರ್ಮಿಕರು ಒಳಗೆ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ನಾಲ್ವರು ಮೃತಪಟ್ಟಿದ್ದಾರೆ. ಉಳಿದವರ ರಕ್ಷಣೆಗೆ ಭರದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆಂಬುಲೆನ್ಸ್‌ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ” ಎಂದು ಕೌಶಂಭಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬ್ರಿಜೇಶ್‌ ಕುಮಾರ್‌ ಶ್ರೀವಾಸ್ತವ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 11 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ವಿರುದ್ಧುನಗರ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ (Firecracker Factory Blast) ಸಂಭವಿಸಿ 11 ಜನ ಮೃತಪಟ್ಟಿದ್ದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿರುದ್ಧುನಗರ ಜಿಲ್ಲೆಯ ವೆಂಬಕೊಟ್ಟಾಯಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ (ಫೆಬ್ರವರಿ 17) ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರೂ ಅಷ್ಟೊತ್ತಿಗಾಗಲೇ ಹಲವು ಜನ ಮೃತಪಟ್ಟಿದ್ದರು ಎಂದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version