Site icon Vistara News

Fire Accident: ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ; ಮಹಿಳೆಯರು, ಮಕ್ಕಳು ಸೇರಿ 24 ಮಂದಿ ದಾರುಣ ಸಾವು

Fire Accident

At Least Seven Killed After Massive Fire At Gaming Zone In Gujarat's Rajkot City

ಗಾಂಧಿನಗರ:‌ ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಮಹಿಳೆಯರು, ಮಕ್ಕಳು ಸೇರಿ 24 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯು ಇಡೀ ಕಟ್ಟಡದ ತುಂಬ ಆವರಿಸಿಕೊಂಡಿದ್ದು, ಇನ್ನೂ ಹಲವರು ಅಗ್ನಿಯ ಕೆನ್ನಾಲಗೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿದುರಂತ ಸಂಭವಿಸಿದ ಕಾರಣ 24 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಸಂಭವಿಸುತ್ತಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೆ 15-20 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

“ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಯನ್ನು ನಂದಿಸಲು ಸಿಬ್ಬಂದಿಯು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದಾಗ್ಯೂ, ಬೆಂಕಿಯಲ್ಲಿ ಎಷ್ಟು ಜನ ಸಿಲುಕಿದ್ದಾರೆ? ಇನ್ನೂ ಎಷ್ಟು ಜನ ಕಾಣೆಯಾಗಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ದೊರೆತಿಲ್ಲ. ಗಾಳಿಯ ತೀವ್ರತೆ ಹಾಗೂ ಬೆಂಕಿಯ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಕಾರಣ ರಕ್ಷಣಾ ಕಾರ್ಯಾಚರಣೆಯು ಕ್ಷಿಪ್ರವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ” ಎಂಬುದಾಗಿ ಅಗ್ನಿಶಾಮಕ ದಳದ ಅಧಿಕಾರಿ ಐ.ವಿ.ಖೇರ್‌ ಅವರು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 11 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೊಂಬಿವಿಲಿ ಬಳಿಯ ಎಂಐಡಿಸಿ ಫೇಸ್‌ 2ರಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕರು ಗುರುವಾರ (ಮೇ 23) ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿತ್ತು ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

Exit mobile version