ನವದೆಹಲಿ: 2002ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Former PM Atal Bihari Vajpayee) ಅವರು ತಮ್ಮ ತಂಡದ ಸಲಹೆಯ ಹೊರತಾಗಿಯೂ ರಾಷ್ಟ್ರಪತಿಯಾಗುವ (President of India) ಅವಕಾಶವನ್ನು ತಿರಸ್ಕರಿಸಿದ್ದರು. ಇಂಥ ಕ್ರಮವು ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು (parliamentary democracy) ದುರ್ಬಲಗೊಳಿಸುತ್ತದೆ ಮತ್ತು ಭವಿಷ್ಯದ ನಾಯಕರಿಗೆ ಅಪಾಯಕಾರಿ ಉದಾಹರಣೆಯಾಗಿ ಉಳಿಯಲಿದೆ ಎಂದು ಅವರ ಮಾಧ್ಯಮ ಸಲಹೆಗಾರರ ಹೊಸ ಪುಸ್ತಕದಲ್ಲಿ (New Book) ತಿಳಿಸಲಾಗಿದೆ.
1998ರಿಂದ 2004ರ ಅವಧಿಯಲ್ಲಿ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದರು. ಈ ವೇಳೆ ಅವರಿಗೆ ಅಶೋಕ್ ಟಂಡನ್ ಅವರು ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರೀಗ The Reverse Swing: Colonialism to Cooperation ಎಂಬ ಪುಸ್ತಕವನ್ನು ಹೊರ ತಂದಿದ್ದಾರೆ. ಕೆ ಆರ್ ನಾರಾಯಣ್ ಅವರ ಅವಧಿಯ ನಂತರ ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಹುದ್ದೆಗೆ ಶಿಫಾರಸು ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಅವರು. ಈ ಶಿಫಾರಸಿಗೆ ಕಾಂಗ್ರೆಸ್ ನಾಯಕರಿಗೆ ಆಶ್ಚರ್ಯವಾದರೂ ಸಮಾಜವಾದಿ ಪಕ್ಷವೂ ಕಲಾಮ್ ಅವರಿಗೆ ಬೆಂಬಲ ಘೋಷಿಸಿದ ಬಳಿಕ ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವಾಯಿತು ಎಂದು ಅವರು ತಮ್ಮ ಹೊಸ ಪುಸ್ತಕದಲ್ಲಿ ಬರೆದಿದ್ದಾರೆ.
ಪ್ರಧಾನಿ ಸ್ಥಾನವನ್ನು ಎಲ್ ಕೆ ಆಡ್ವಾಣಿ ಅವರಿಗೆ ಬಿಟ್ಟುಕೊಟ್ಟು, ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಲು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅವರ ತಂಡವು ಸೂಚಿಸುತ್ತದೆ. ಒಂದು ವೇಳೆ ಹಾಲಿ ಪ್ರಧಾನಿಯೊಬ್ಬರು ಭಾರೀ ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಅದು ಭಾರತೀಯ ಸಂಸದೀಯ ಮಾದರಿ ವ್ಯವಸ್ಥೆಯನ್ನು ಕಡೆಗಣಿಸಿದಂತಾಗಲಿದೆ ಮತ್ತು ಭವಿಷ್ಯದ ನಾಯಕರಿಗೆ ಕೆಟ್ಟ ಸಂಪ್ರದಾಯವನ್ನು ಹಾಕಿಕೊಟ್ಟಂತಾಗಲಿದೆ ಎಂದು ವಾಜಪೇಯಿ ಅವರು ತಮಗೆ ಬಂದಿದ್ದ ಆಫರ್ ತಿರಸ್ಕರಿಸಿದ್ದರು.
ಭಾರೀ ಬಹುಮತದ ಸಹಾಯದಿಂದ ಹಾಲಿ ಪ್ರಧಾನಿಯೊಬ್ಬರು ರಾಷ್ಟ್ರಪತಿಯಾಗುವುದು ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಾಗುವುದಿಲ್ಲ ಮತ್ತು ಅತ್ಯಂತ ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ ಮತ್ತು ಅಂತಹವರನ್ನು ಬೆಂಬಲಿಸುವ ಕೊನೆಯ ವ್ಯಕ್ತಿ ಅವರು ಎಂದು ಅವರು ಎಚ್ಚರಿಸಿದ್ದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Atal Bihari Vajpayee Birth Day | ಭಾರತದ ಭದ್ರತಾ ವ್ಯವಸ್ಥೆಗೆ ಅಟಲ್ ಬಿಹಾರಿ ವಾಜಪೇಯಿ ಅವರ 5 ಕೊಡುಗೆಗಳು
ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ ಮತ್ತು ಡಾ. ಮನಮೋಹನ್ ಸಿಂಗ್ ಅವರು ವಾಜಪೇಯಿ ಅವರನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ, ಅವರು ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂಬ ಮಾಹಿತಿಯನ್ನು ಬಹಿರಂಗೊಳಿಸಿದರು ಎಂದು ಟಂಡನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ವಾಜಪೇಯಿಯವರ ಅಚ್ಚರಿಯ ಘೋಷಣೆಯ ನಂತರ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಆಶ್ಚರ್ಯ ವ್ಯಕ್ತಪಡಿಸಿದರು. ನಿಮ್ಮ ಆಯ್ಕೆಯಿಂದ ನಾವು ಗಾಬರಿಗೊಂಡಿದ್ದೇವೆ ಎಂದು ಸೋನಿಯಾ ಗಾಂಧಿ ಹೇಳಿದರು. “ಅವರನ್ನು (ಕಲಾಂ) ಬೆಂಬಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ, ಆದರೆ ನಿಮ್ಮ ಪ್ರಸ್ತಾಪವನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಾಜಪೇಯಿ ಅವರಿಗೆ ತಿಳಿಸಿದರು.