Site icon Vistara News

Atal Setu: “ಅಟಲ್‌ ಸೇತು ಸುಭದ್ರವಾಗಿದೆ..ಯಾವುದೇ ಬಿರುಕಿಲ್ಲ”- ಕಾಂಗ್ರೆಸ್‌ ಆರೋಪಕ್ಕೆ MMRDA ಸ್ಪಷ್ಟನೆ

Atal Setu

MMRDA Official Dismisses Congress' Claim, Admits There Are Minor Cracks on Service Road Connecting to Sea Bridge in Mumbai

ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ಗೆ (Mumbai Trans Harbour Link-MTHL) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಐದೇ ತಿಂಗಳಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಕಾಂಗ್ರೆಸ್‌ ಆರೋಪದ ಬೆನ್ನಲ್ಲೇ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(MMRDA) ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಎಕ್ಸ್‌ನಲ್ಲಿ ವಿಡಿಯೋ ಸಮೇತ ಸ್ಪಷ್ಟನೆ ನೀಡಿರುವ MMRDA, ಕಾಂಗ್ರೆಸ್‌ ಮಾಡಿರುವ ಆರೋಪಕ್ಕೂ ಅಟಲ್‌ ಸೇತುವೆಗೆ ಯಾವುದೇ ಸಂಬಂಧ ಇಲ್ಲ. ಅವರ ವಿಡಿಯೋದಲ್ಲಿ ತೋರಿಸಿರುವುದು ಉಲ್ವೇಯಿಂದ ಮುಂಬೈಗೆ ಸಂಪರ್ಕಿಸುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ರಸ್ತೆಯಾಗಿದೆ. ಬಿರುಕು ಬಿಟ್ಟಿರುವುದು ಆ ರಸ್ತೆಯಲ್ಲೇ ಹೊರತು ಅಟಲ್‌ ಸೇತುವೆಯಲ್ಲಿ ಅಲ್ಲ‌. MTHL ಅನ್ನು ಕೂಡ ಅಟಲ್‌ ಸೇತು ಎಂದೇ ಕರೆಯಲಾಗುತ್ತದೆ ಎಂದು ಸ್ಪಷ್ಟನೆ ಕೊಟ್ಟಿದೆ.

ಕಾಂಗ್ರೆಸ್‌ ಆರೋಪ ಏನು?

ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ಗೆ (Mumbai Trans Harbour Link-MTHL) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಐದೇ ತಿಂಗಳಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಕಾಂಗ್ರೆಸ್‌ ಆರೋಪಿಸಿತ್ತು. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಳೆ (Nana Patole) ಅವರು ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ಜನರಿಗೆ ತೋರಿಸಿ ರಸ್ತೆ ಸುರಕ್ಷತೆಯನ್ನು ಪರಿಶೀಲಿಸಿದ್ದಾರೆ. ಹಾಗೆಯೇ, ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಆರೋಪಿಸಿದ್ದಾರೆ.

ನವಿ ಮುಂಬೈನ ಉಲ್ವೆ ಕಡೆ ಹೋಗುವ ಸೇತುವೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿವೆ. “ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟಿದೆ. ಸರ್ಕಾರವು ಜನರ ದುಡ್ಡನ್ನು ಜೇಬಿಗೆ ಇಳಿಸಿಕೊಂಡು, ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ಜನ ಕಿತ್ತೆಸೆಯಬೇಕು. ಸೇತುವೆಗೆ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದಾರೆ. ನಮಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೆಸರಿನ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಮೋದಿ ಅವರು ಈ ಕುರಿತು ಗಮನಿಸಬೇಕು” ಎಂದು ನಾನಾ ಪಟೋಳೆ ಆರೋಪಿಸಿದ್ದಾರೆ. 2024ರ ಜನವರಿಯಲ್ಲಿ ನರೇಂದ್ರ ಮೋದಿ ಅವರು ಅಟಲ್‌ ಸೇತುಗೆ ಚಾಲನೆ ನೀಡಿದ್ದರು.

ಇದನ್ನೂ ಓದಿ: Heat wave: ಉಷ್ಣ ಮಾರುತಕ್ಕೆ ತತ್ತರಿಸಿದ ಉತ್ತರ ಭಾರತ; ದೇಶಾದ್ಯಂತ 143 ಜನ ಬಲಿ

Exit mobile version