Site icon Vistara News

Atiq Ahmed: ಅತೀಕ್‌, ಅಶ್ರಫ್‌ ಹತ್ಯೆ; ಅಯೋಧ್ಯೆಯಲ್ಲಿ ಅಲರ್ಟ್‌, ಯೋಗಿಯ ಎಲ್ಲ ಕಾರ್ಯಕ್ರಮ ರದ್ದು

Next Target Kashi and Mathura Masjid Says CM Yogi Adityanath

ಲಖನೌ: ಗ್ಯಾಂಗ್‌ಸ್ಟರ್‌ಗಳಾದ ಅತೀಕ್‌ ಅಹ್ಮದ್‌ (Atiq Ahmed) ಹಾಗೂ ಆತನ ಸಹೋದರ ಅಶ್ರಫ್‌ ಅಹ್ಮದ್‌ನನ್ನು ಪ್ರಯಾಗ್‌ರಾಜ್‌ನಲ್ಲಿ ಶನಿವಾರ (March 15) ರಾತ್ರಿ ಹತ್ಯೆ ಮಾಡಲಾಗಿದೆ. ಇದು ರಾಜ್ಯ ಮಾತ್ರವಲ್ಲ, ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಈಗಾಗಲೇ ಗುಂಡಿನ ದಾಳಿ ನಡೆಸಿರುವ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಡೀ ದಿನದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ಪ್ರಯಾಗ್‌ರಾಜ್‌ ಹಾಗೂ ಅಯೋಧ್ಯೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಉತ್ತರ ಪ್ರದೇಶದ ಬಹುತೇಕ ಕಡೆ ಭಾನುವಾರ ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಹಾಗೆಯೇ, ಪ್ರಮುಖ ಧಾರ್ಮಿಕ ಕೇಂದ್ರಗಳಾದ ಅಯೋಧ್ಯೆ, ವಾರಾಣಸಿ, ಮಥುರಾ ಸೇರಿ ಹಲವೆಡೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ದೇವಾಲಯಗಳಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಅರ್ಚಕರಿಗೂ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಅಯೋಧ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಆರ್‌ಪಿಎಫ್ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.

ದಿನದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಯೋಗಿ ಆದಿತ್ಯನಾಥ್‌ ಅವರು, ಪ್ರಕರಣದ ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ಸಮಿತಿಯನ್ನು ರಚಿಸಿದ್ದಾರೆ. ಘಟನೆಯ ಕೂಡಲೇ ಉನ್ನತ ಮಟ್ಟದ ಸಭೆ ನಡೆಸಿ, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಗುಂಡಿನ ದಾಳಿ ನಡೆಸಿದ ಲವಲೇಶ್‌ ತಿವಾರಿ, ಸನ್ನಿ ಸಿಂಗ್‌ ಹಾಗೂ ಅರುಣ್‌ ಮೌರ್ಯನನ್ನು ಬಂಧಿಸಲಾಗಿದ್ದು, ಇವರು ಶನಿವಾರ ರಾತ್ರಿ ಪತ್ರಕರ್ತರ ಸೋಗಿನಲ್ಲಿ ಬಂದು ಗ್ಯಾಂಗ್‌ಸ್ಟರ್‌ಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಗೆ ಪ್ಲಾನ್‌ ಮಾಡಿದ್ದು ಹೇಗೆ?

ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಅತಿಕ್‌ ಹಾಗೂ ಅಶ್ರಫ್‌ರನ್ನು ಪೊಲೀಸರು ಕರೆತರಲಿದ್ದಾರೆ ಎಂಬ ಮಾಹಿತಿ ಮೊದಲೇ ಮೂವರಿಗೆ ಗೊತ್ತಿತ್ತು. ಹಾಗಾಗಿ, ಅವರು ಪ್ರಯಾಗ್‌ರಾಜ್‌ಗೆ ಆಗಮಿಸಿ, ಲಾಡ್ಜ್‌ ಮಾಡಿಕೊಂಡು ಯೋಜನೆ ರೂಪಿಸಿದ್ದರು. ಆಗ ಅವರು ಪತ್ರಕರ್ತರ ಸೋಗಿನಲ್ಲಿ ಪ್ರಯಾಗ್‌ರಾಜ್‌ ಮೆಡಿಕಲ್‌ ಕಾಲೇಜಿಗೆ ಆಗಮಿಸಿದ್ದಾರೆ. ಸೊಂಟದಲ್ಲಿ ಗನ್‌ ಇಟ್ಟುಕೊಂಡು, ಕೈಯಲ್ಲಿ ಮೈಕ್‌ ಹಿಡಿದುಕೊಂಡು ಬಂದ ಅವರು, ಮಾಧ್ಯಮದವರ ಜತೆ ಅತೀಕ್‌ ಮಾತನಾಡುವಾಗಲೇ ಮೂವರಲ್ಲಿ ಒಬ್ಬ ಅವನ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಬಳಿಕ ಮೂವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅಂಡರ್‌ವರ್ಲ್ಡ್‌ನಲ್ಲಿ ತುಂಬ ಫೇಮಸ್‌ ಆಗಬೇಕು ಎಂಬ ದೃಷ್ಟಿಯಿಂದ ಇವರು ದಾಳಿ ನಡೆಸಿದ್ದಾಗಿ ಪೊಲೀಸ್‌ ವಿಚಾರಣೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪತ್ರಕರ್ತರು ಎಂದು ಬಿಂಬಿಸಲು ಅವರು ನಕಲಿ ಐಡಿ ಕಾರ್ಡ್‌, ಕ್ಯಾಮೆರಾಗಳನ್ನು ಕೂಡ ತಂದಿದ್ದರು ಎಂದು ಕೂಡ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Atiq Ahmed: ಪ್ರಸಿದ್ಧಿಗಾಗಿ ಅತೀಕ್​-ಅಶ್ರಫ್​​ನನ್ನು ಕೊಂದೆವು; ಪೊಲೀಸರ ಎದುರು ಈ ಉತ್ತರ ಕೊಟ್ಟ ಆರೋಪಿಗಳು

Exit mobile version