ಲಖನೌ/ನವದೆಹಲಿ: ಉತ್ತರ ಪ್ರದೇಶದ ರಾಜಕಾರಣಿ, ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹತ್ಯೆಯ ಆರೋಪಿಗಳನ್ನು ಪ್ರತಾಪ್‌ಗಢ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ಸಾವಿಗೂ 15 ದಿನ ಮೊದಲು ಅತೀಕ್ ಅಹ್ಮದ್ ಸುಪ್ರೀಂ ಕೋರ್ಟ್‌ಗೆ ರಹಸ್ಯ ಪತ್ರ (Atiq Ahmed Letter) ಬರೆದಿರುವುದು ಬೆಳಕಿಗೆ ಬಂದಿದೆ. ಅತೀಕ್ ಅಹ್ಮದ್ ಬರೆದ ಪತ್ರವನ್ನು ಆತನ ವಕೀಲರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರ ಹತ್ಯೆಯ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ ಕಾರಣ ಅತೀಕ್ ಅಹ್ಮದ್‌ಗೆ ಸಾವಿನ ಭೀತಿ ಇತ್ತು. ಹಾಗಾಗಿಯೇ ಆತ 15 ದಿನಗಳ ಮೊದಲೇ ಸುಪ್ರೀಂ ಕೋರ್ಟ್‌ಗೆ ರಹಸ್ಯ ಬರೆದಿದ್ದ. ನಾನೊಂದು ವೇಳೆ ಸಾವಿಗೀಡಾದರೆ, ಈ ಪತ್ರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವಂತೆ ವಕೀಲರಿಗೆ ಅತೀಕ್ ಮನವಿ ಮಾಡಿದ್ದ ಎಂದು ತಿಳಿದುಬಂದಿದೆ.
“ಜೈಲಿನಲ್ಲಿ ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ಕೊಲ್ಲುತ್ತೇವೆ ಎಂಬುದಾಗಿ ಹೆದರಿಸುತ್ತಿದ್ದಾರೆ. ಉಳಿದ ಎಲ್ಲ ಮಾಹಿತಿ ಈ ಪತ್ರದಲ್ಲಿದೆ ಎಂಬುದಾಗಿ ಅತೀಕ್ ಅಹ್ಮದ್ ತಿಳಿಸಿದ್ದ” ಎಂದು ಅತೀಕ್ ಪರ ವಕೀಲರು ತಿಳಿಸಿದ್ದಾರೆ. ಹಾಗೆಯೇ, ಅತೀಕ್ ಅಹ್ಮದ್ ಕೋರಿಕೆಯಂತೆ ಆತ ಬರೆದ ಪತ್ರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ, ಅತೀಕ್ ಅಹ್ಮದ್ ಬರೆದ ಪತ್ರದಲ್ಲಿ ಯಾವ ಮಾಹಿತಿ ಇದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದಾಗ್ಯೂ, “ಪೊಲೀಸರು ನನ್ನನ್ನು ಎನ್‌ಕೌಂಟರ್ ಮಾಡುತ್ತಾರೆ” ಎಂದೇ ಅತೀಕ್ ಹೇಳುತ್ತಿದ್ದ. ಆದರೆ, ಗ್ಯಾಂಗ್‌ಸ್ಟರ್‌ಗಳು ಆತನನ್ನು ಪ್ರಯಾಗ್‌ರಾಜ್‌ನಲ್ಲಿ ಹತ್ಯೆ ಮಾಡಿದ್ದಾರೆ.
ತನಿಖೆಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
ಪೊಲೀಸರ ಸುಪರ್ದಿಯಲ್ಲಿದ್ದಾಗಲೇ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ನ ಹತ್ಯೆ ನಡೆದಿರುವ ಕುರಿತು ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿಯೇ ತನಿಖೆಯಾಗಬೇಕು ಎಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. “ಪ್ರಕರಣದ ತನಿಖೆ ಕುರಿತು ಸುಪ್ರೀಂ ಕೋರ್ಟ್ ಸಮಿತಿ ರಚಿಸಬೇಕು. ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯು ತನಿಖೆ ನಡೆಸಬೇಕು” ಎಂದು ವಕೀಲ ವಿಶಾಲ್ ತಿವಾರಿ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ, ಉತ್ತರ ಪ್ರದೇಶದಲ್ಲಿ ಪೊಲೀಸರು 2017ರ ಬಳಿಕ ಎನ್‌ಕೌಂಟರ್‌ನಲ್ಲಿ 183 ಜನರನ್ನು ಹತ್ಯೆ ಮಾಡಿದ್ದು, ಇದರ ಕುರಿತು ಕೂಡ ತನಿಖೆ ನಡೆಯಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.