Site icon Vistara News

ಕೆಟ್ಟ ನಿಂತ ಡ್ರಿಲ್ಲಿಂಗ್ ಯಂತ್ರ! ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸ್ಥಗಿತ

Vistara Editorial, Ensure safety of workers during massive projects

ಡೆಹ್ರಾಡೂನ್: 130 ಗಂಟೆಗಳಿಗೂ ಹೆಚ್ಚು ಕಾಲ ಸುರಂಗದೊಳಗೆ (Tunnel Collapse) ಸಿಲುಕಿರುವ 40 ಕಾರ್ಮಿಕರನ್ನು (40 workers trapped) ರಕ್ಷಿಸಲು ಸಮಯದ ಜತೆಗೆ ಸ್ಪರ್ಧೆಗೆ ಬಿದ್ದಿರುವ ರಕ್ಷಣಾ ಕಾರ್ಯಕರ್ತರಿಗೆ ಶುಕ್ರವಾರ ಮತ್ತೊಂದು ಹಿನ್ನಡೆ ಎದುರಾಗಿದೆ. ಹೈ ಪವರ್ ಡ್ರಿಲ್ಲಿಂಗ್ ಮಷಿನ್ (auger drilling machine) ಕೈ ಕೊಟ್ಟಿದೆ. 22 ಮೀಟರ್ ಡ್ರಿಲ್ಲಿಂಗ್ ಮಾಡಿರುವ ಈ ಮಷಿನ್ ಬೇರಿಂಗ್‌ಗಳು ಜಾಮ್ ಆದ್ದರಿಂದ ಕಲ್ಲಿನ ಮಧ್ಯೆಗಳ ಸಿಲುಕಿಕೊಂಡಿದೆ. ಇದರಿಂದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆ ಭಾರೀ ಅಡ್ಡಿ ಎದುರಾಗಿದೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿದೆ. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಇಷ್ಟಾದರೂ ಜನರನ್ನು ಹೊರಗೆ ತರಲು ಆಗುತ್ತಿಲ್ಲ. ಹಲವು ಕಾರಣಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕುಟುಂಬಸ್ಥರು ಅಧಿಕಾರಿಗಳು, ಸಿಬ್ಬಂದಿ, ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಬೆಳಿಗ್ಗೆ 9 ಗಂಟೆಯ ನಂತರ ಡ್ರಿಲ್ಲಿಂಗ್‌ನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಸುಮಾರು 22 ಮೀಟರ್ ಕೊರೆದಿರುವ ಡ್ರಿಲ್ಲಿಂಗ್ ಮಷಿನ್ ಬಳಿಕ ಸ್ಥಗಿತಗೊಂಡಿತು. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಡ್ರಿಲ್ಲಿಂಗ್ ಮಷಿನ್‌ಗೆ ಕಲ್ಲು ಎದುರಾದ್ದರಿಂದ ಹಾಳಾಗಿತ್ತು. ಈ ವೇಳೆ, ಕೇವಲ 3 ಮೀಟರ್ ಕೊರೆಯಲು ಮಾತ್ರವೇ ಸಾಧ್ಯವಾಗಿತ್ತು. ಇದಕ್ಕೂ ಮೊದಲು ಮೊದಲ ಆರು ಗಂಟೆಗಳಲ್ಲಿ ಒಂಬತ್ತು ಮೀಟರ್, ಒಂಬತ್ತು ಗಂಟೆಗಳಲ್ಲಿ 12 ಮೀಟರ್ ಮತ್ತು 20 ಗಂಟೆಗಳಲ್ಲಿ 22 ಮೀಟರ್ ಪ್ರಗತಿ ಸಾಧಿಸಲು ಸಾಧ್ಯವಾಯಿತು.

ಈ ಮಧ್ಯೆ ಹೆಚ್ಚುವರಿಯಾಗಿ, ಆಗರ್ ಡ್ರಿಲ್ಲಿಂಗ್ ಯಂತ್ರವನ್ನು ಕೂಡ ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇಂದೋರ್‌ನಿಂದ ವಾಯು ಮಾರ್ಗವಾಗಿ ಶನಿವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಈ ಯಂತ್ರ ತಲುಪುವ ಸಾಧ್ಯತೆಗಳಿವೆ. ಈ ಯಂತ್ರವು ಪ್ರತಿ ಗಂಟೆಗೆ 5 ಮೀಟರ್ ವೇಗದಲ್ಲಿ ಕಲ್ಲುಮಣ್ಣುಗಳ ಮೂಲಕ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಅದರ ದಾರಿಯಲ್ಲಿನ ಅಡಚಣೆಗಳು ಈಗ ಪ್ರಮಾಣಿತ ವೇಗದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಬಹುದು.

ಅತ್ಯಾಧುನಿಕ ಡ್ರಿಲ್ಲಿಂಗ್‌ ಮಷೀನ್‌ ಬಳಕೆ

ಶುಕ್ರವಾರ ಬೆಳಗಿನ ಜಾವದಿಂದಲೇ ರಕ್ಷಣಾ ಕಾರ್ಯಾಚರಣೆಗೆ ಅತ್ಯಾಧುನಿಕ ಡ್ರಿಲ್ಲಿಂಗ್‌ ಮಷೀನ್‌ ಬಳಕೆ ಮಾಡಲಾಗಿದ್ದು, ಇದರಿಂದಲೇ ಸುಮಾರು 21 ಮೀಟರ್‌ ಕೊರೆಯಲಾಗಿದೆ. ಮತ್ತೆ ಮೂರು ಪೈಪ್‌ಗಳನ್ನು ಅಳವಡಿಸಲಾಗಿದ್ದು, ಒಳಗೆ ಸಿಲುಕಿರುವ ಕಾರ್ಮಿಕರಿಗೆ ನೀರು, ಊಟ, ಕೃತಕ ಆಮ್ಲಜನಕ ಸೇರಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಅವಶೇಷದ ಪ್ರಮಾಣವು ಜಾಸ್ತಿ ಇರುವ ಕಾರಣ ರಕ್ಷಣೆ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ಭಾರಿ ಅವಶೇಷ ಇರುವ ಕಾರಣ ಇನ್ನೂ ಎರಡು-ಮೂರು ದಿನ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುತ್ತಿದೆ.

ಈ ಸುದ್ದಿಯನ್ನೂ ಓದಿ: ಸುರಂಗದಲ್ಲಿ ಸಿಲುಕಿದ 40 ಜನಕ್ಕೆ ಅನಾರೋಗ್ಯ; 6 ದಿನವಾದರೂ ರಕ್ಷಣೆ ದುಸ್ಸಾಧ್ಯ

Exit mobile version