ಮುಂಬಯಿ: ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಜಿಲ್ಲೆಗಳ ಹೆಸರುಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಶಿವ್ ಎಂದು ಬದಲಾಯಿಸುವ (Name Change) ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಎರಡೂ ಜಿಲ್ಲೆಗಳು ಮರಾಠಾವಾಡ ಪ್ರದೇಶದ ಭಾಗವಾಗಿವೆ. ಮೊಘಲರ ಕಾಲದಲ್ಲಿ ನಾಮಕರ ಮಾಡಲಾಗಿದ್ದ ಈ ನಗರದ ಹೆಸರುಗಳನ್ನು ಬದಲಾವಣೆ ಮಾಡುವ ಪ್ರಸ್ತಾಪ ಹಿಂದಿನಿಂದಲೂ ಇತ್ತು. ಇದೀಗ ಅಧಿಕೃತಗೊಳಿಸಲಾಗಿದೆ.
ಸರ್ಕಾರದ ಆದೇಶಗಳು ಜಾರಿಯಾಗಿದ್ದು ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಪ್ರದೇಶ, ಜಿಲ್ಲೆಗಳು, ತಹಸಿಲ್ಗಳು ಮತ್ತು ಗ್ರಾಮಗಳನ್ನು ಕ್ರಮವಾಗಿ ‘ಛತ್ರಪತಿ ಸಂಭಾಜಿನಗರ’ ಮತ್ತು ‘ಧಾರಶಿವ್’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಸಂತೋಷ್ ಗಾವ್ಡೆ ತಿಳಿಸಿದ್ದಾರೆ.
“ಮುಖ್ಯಮಂತ್ರಿ ಏಕನಾಥ ಶಿಂಧೆ , ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಡ್ , ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇಂದು ಸಂಭಾಜಿನಗರ ಮತ್ತು ಧಾರಶಿವ್ ಮರುನಾಮಕರಣ ಫಲಕಗಳನ್ನು ಅನಾವರಣಗೊಳಿಸಿದರು. ಛತ್ರಪತಿ ಸಂಭಾಜಿನಗರ ಕಂದಾಯ ವಿಭಾಗವನ್ನು ಹೊಂದಿರುವ ಜಿಲ್ಲೆ, ಉಪವಿಭಾಗ, ತಾಲೂಕು, ಗ್ರಾಮ ಮತ್ತು ಧಾರಾಶಿವ್ ಜಿಲ್ಲೆ ಉಪವಿಭಾಗ, ತಾಲೂಕು, ಗ್ರಾಮವನ್ನು ಮರುನಾಮಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ ಮಹಾರಾಷ್ಟ್ರ) ಮರಾಠಿಯಲ್ಲಿ ಟ್ವೀಟ್ ಮಾಡಿದೆ.
ರಾಜ್ಯ ಕಂದಾಯ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಕೆಲವು ತಿಂಗಳ ಹಿಂದೆ ಕೋರಲಾದ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸರ್ಕಾರ ಪರಿಗಣಿಸಿದೆ. ಉಪವಿಭಾಗ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಿದೆ.
ಉದ್ಧವ್ ಠಾಕ್ರೆ ಸರ್ಕಾರದ ನಿರ್ಧಾರ
ಈ ನಿರ್ಧಾರವನ್ನು ಹಿಂದಿನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು 2022ರ ಜೂನ್ 29 ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಕೊನೇ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡಿತ್ತು. ಇದನ್ನು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಜುಲೈ 16, 2022 ರಂದು ದೃಢಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಈ ನಿರ್ಧಾರವನ್ನು ತಡೆಹಿಡಿಯಲಾಗಿತ್ತು.
ಈ ಕುರಿತ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಎರಡು ಜಿಲ್ಲೆಗಳ ಮರುನಾಮಕರಣಕ್ಕೆ ರಾಜ್ಯ ಸರ್ಕಾರವು ಕೇಂದ್ರ ಗೃಹ ಸಚಿವಾಲಯದಿಂದ ಅನುಮೋದನೆ ಪಡೆದಿದೆ ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಔರಂಗಾಬಾದ್ನ ಹೆಸರನ್ನು ‘ಛತ್ರಪತಿ ಸಂಭಾಜಿನಗರ’ ಮತ್ತು ಉಸ್ಮಾನಾಬಾದ್ ನಗರವನ್ನು ‘ಧಾರಾಶಿವ್’ ಎಂದು ಬದಲಾಯಿಸಲು ಭಾರತ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಶ್ಯಾಮಲ್ ಕುಮಾರ್ ಬಿಟ್ ಫೆಬ್ರವರಿಯಲ್ಲಿ ಹೊರಡಿಸಿದ ಆದೇಶಗಳಲ್ಲಿ ತಿಳಿಸಲಾಗಿದೆ.
ಔರಂಗಾಬಾದ್ ವಿಮಾನ ನಿಲ್ದಾಣವನ್ನು ‘ಛತ್ರಪತಿ ಸಂಭಾಜಿ ಮಹಾರಾಜ್ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಅಘಾಡಿ ಸರ್ಕಾರ ಮಾರ್ಚ್ 2020 ರಲ್ಲಿ ಅನುಮೋದಿಸಿತ್ತು. ಬಲಪಂಥೀಯ ಗುಂಪುಗಳು ಮತ್ತು ದಿವಂಗತ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರು ಅವರು ಮರುನಾಮಕರಣದ ಪ್ರಸ್ತಾಪ ಎತ್ತಿದ್ದರು. ಜಿಲ್ಲೆಗಳು ಮತ್ತು ನಗರಗಳ ಮರುನಾಮಕರಣವು ವಿವಾದಾತ್ಮಕ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಯಾಗಿದ್ದವು.
ಶಿವಾಜಿಯ ಪುತ್ರ ಸಂಭಾಜಿ
ಛತ್ರಪತಿ ಸಂಭಾಜಿ ಮರಾಠಾ ರಾಜ ಛತ್ರಪತಿ ಶಿವಾಜಿಯ ಪುತ್ರ. ಆಗಿನ ಮೊಘಲ್ ಚಕ್ರವರ್ತಿ ಔರಂಗಜೇಬ್ನಿಂದ ಹತ್ಯೆಗೊಳಲಾಗಿದ್ದವರು. 1980ರ ದಶಕದ ಉತ್ತರಾರ್ಧದಲ್ಲಿ 1988ರಲ್ಲಿ ನಡೆದ ಕೋಮು ಗಲಭೆಯಲ್ಲಿ 25 ಕ್ಕೂ ಹೆಚ್ಚು ಜನರು ಇಲ್ಲಿ ಮೃತಪಟ್ಟಿದ್ದರು. ನಂತರದ ಚುನಾವಣೆಗಳಲ್ಲಿ, ಶಿವಸೇನೆ, ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಮೇ 8, 1988 ರಂದು ಶಿವಸೇನೆ ಮುಖ್ಯಸ್ಥರಾಗಿದ್ದ ದಿ. ಬಾಳಾಸಾಹೇಬ್ ಠಾಕ್ರೆ ಅವರು ನಗರವನ್ನು ‘ಸಂಭಾಜಿ ನಗರ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದರು.
1995ರಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ನಿರ್ಣಯ ಅಂಗೀಕರಿಸಿತ್ತು, ಅಂದಿನ ಶಿವಸೇನೆ ನೇತೃತ್ವದ ಸರ್ಕಾರವು ಜನರಿಂದ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಕೋರಿ ಅಧಿಸೂಚನೆಯನ್ನು ಹೊರಡಿಸಿತ್ತು.