Site icon Vistara News

ಮಸೀದಿ ನಿರ್ಮಿಸಲು ಔರಂಗಜೇಬನಿಂದ ಮಥುರಾ ದೇಗುಲ ನೆಲಸಮ; ಪುರಾತತ್ವ ಇಲಾಖೆಯ ಸ್ಫೋಟಕ ಮಾಹಿತಿ

Mathura

Aurangzeb Demolished Mathura Krishna Janmabhoomi Complex Temple To Build Mosque: ASI

ನವದೆಹಲಿ: ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಿಸಲಾಗಿದೆ. ಇದಾದ ಬಳಿಕ ಕಾಶಿ, ಮಥುರಾದಲ್ಲೂ ಮಸೀದಿಗಳ ಜಾಗದಲ್ಲಿ ದೇವಾಲಯ ನಿರ್ಮಿಸಬೇಕು ಎಂಬ ಜನಾಗ್ರಹ ಕೇಳಿಬರುತ್ತಿದೆ. ಈಗಾಗಲೇ, ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮಾಡಲು ನ್ಯಾಯಾಲಯವೂ ಅವಕಾಶ ನೀಡಿದೆ. ಇದರ ಬೆನ್ನಲ್ಲೇ, “ಮಸೀದಿ ನಿರ್ಮಿಸಲು ಮೊಘಲ್‌ ದೊರೆ ಔರಂಗಜೇಬನು (Mughal Emperor Aurangzeb) ಮಥುರಾ ಕೃಷ್ಣಜನ್ಮಭೂಮಿ ಸಮುಚ್ಚಯವನ್ನು (Krishna Janmabhoomi Complex) ನೆಲಸಮ ಮಾಡಿದ” ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (Archaeological Survey of India) ಸ್ಫೋಟಕ ಮಾಹಿತಿ ನೀಡಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಉತ್ತರ ಪ್ರದೇಸದ ಮೈನ್‌ಪುರಿ ನಿವಾಸಿ ಅಜಯ್‌ ಪ್ರತಾಪ್‌ ಸಿಂಗ್‌ ಎಂಬುವರು ಕೇಳಿದ ಪ್ರಶ್ನೆಗೆ ಎಎಸ್‌ಐ ಮಾಹಿತಿ ನೀಡಿದೆ. 1920ರ ಗೆಜೆಟ್‌ ದಾಖಲೆಯನ್ನು ಆಧರಿಸಿ ಎಎಸ್‌ಐ ಮಾಹಿತಿ ಒದಗಿಸಿದೆ. “ಔರಂಗಜೇಬನು ಮಸೀದಿ ನಿರ್ಮಿಸಲು ಉತ್ತರ ಪ್ರದೇಶದ ಮಥುರಾದಲ್ಲಿ ದಿಬ್ಬದ ಮೇಲೆ ನಿರ್ಮಿಸಲಾಗಿದ್ದ ಕೇಶವದೇವ ಮಂದಿರವನ್ನು ನೆಲಸಮ ಮಾಡಿದ. ಇಡೀ ಸಮುಚ್ಚಯವನ್ನು ಒಡೆದು ಹಾಕಿ, ಆ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಿದ” ಎಂದು ಎಎಸ್‌ಐ ಮಾಹಿತಿ ಒದಗಿಸಿದೆ.

ಕಾನೂನು ಹೋರಾಟಕ್ಕೆ ಬಲ

ಮಥುರಾದಲ್ಲಿ ಕೃಷ್ಣ ಮಂದಿರಕ್ಕಾಗಿ ಈಗಾಗಲೇ ಕಾನೂನು ಹೋರಾಟ ನಡೆಸಲಾಗುತ್ತಿದ್ದು, ಇದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೀಡಿದ ಆರ್‌ಟಿಇ ಮಾಹಿತಿಯು ಹೆಚ್ಚಿನ ಬಲ ನೀಡಿದೆ. ಶಾಹಿ ಈದ್ಗಾ ಮಸೀದಿ ತೆರವಿಗೆ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷ, ವಕೀಲರೂ ಆಗಿರುವ ಮಹೇಂದ್ರ ಪ್ರತಾಪ್‌ ಸಿಂಗ್‌ ಅವರು ಎಎಸ್‌ಐ ನೀಡಿದ ಮಾಹಿತಿಯನ್ನು ಅಲಹಾಬಾದ್‌ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ಒದಗಿಸಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: Krishna Janmabhoomi: ಮಥುರಾ ಶಾಹಿ ಈದ್ಗಾ ಮಸೀದಿಯ ಸರ್ವೇಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

“ಔರಂಗಜೇಬನು 1670ರಲ್ಲಿ ಮಸೀದಿ ತೆರವಿಗೆ ಆದೇಶ ಹೊರಡಿಸಿದ್ದು, ಮಂದಿರ ಕೆಡವಿ ಮಸೀದಿ ನಿರ್ಮಿಸಿರುವ ಕುರಿತು ಐತಿಹಾಸಿಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಯೇ ಹೋರಾಟ ನಡೆಸುತ್ತಿದ್ದೇವೆ. ಈಗ ಔರಂಗಜೇಬನೇ ಮಂದಿರ ಕೆಡವಿ, ಮಸೀದಿ ನಿರ್ಮಿಸಿದ್ದಾನೆ ಎಂದು ಎಎಸ್‌ಐ ಕೂಡ ಮಾಹಿತಿ ನೀಡಿದೆ. ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಫೆಬ್ರವರಿ 22ರಂದು ನಡೆಯುವ ವಿಚಾರಣೆ ವೇಳೆ ಎಎಸ್‌ಐ ವರದಿಯನ್ನೂ ಸಲ್ಲಿಸಲಾಗುವುದು” ಎಂದು ಮಹೇಂದ್ರ ಪ್ರತಾಪ್‌ ಸಿಂಗ್‌ ತಿಳಿಸಿದ್ದಾರೆ.

ಕಾತ್ರಾ ಕೇಶವ ದೇವ್‌ ದೇವಾಲಯ ನೆಲಸಮಗೊಳಿಸಿ, ದೇವಾಲಯಕ್ಕೆ ಸೇರಿದ 13.37 ಎಕರೆ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಈದ್ಗಾ ಶಾಹಿ ಮಸೀದಿಯನ್ನು ನೆಲಸಮಗೊಳಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯ ಅರ್ಹತೆ ಕುರಿತು ಫೆಬ್ರವರಿ 22ರಂದು ಅಲಹಾಬಾದ್‌ ಹೈಕೋರ್ಟ್‌ ವಿಚಾರಣೆ ನಡೆಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version