ತಿರುವನಂತಪುರಂ : ಆತ ಆಟೋ ಡ್ರೈವರ್. ಅಡುಗೆ ಕೆಲಸವೂ ಗೊತ್ತು. ಆದರೆ, ಊರಿನಲ್ಲಿ ಮಾಡಿದ ದುಡಿಮೆ ಸಾಲುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಪಾದನೆ ಮಾಡಲು ಮಲೇಷ್ಯಾಕ್ಕೆ ಹೊರಟ್ಟಿದ್ದರು. ಅಲ್ಲಿಗೆ ಹೋಗಲು ವಿಮಾನದ ಟಿಕೆಟ್‌ಗೂ ಕಾಸಿಲ್ಲ. ಇದ್ದ ಬದ್ದ ದಾಖಲೆಗಳನ್ನೆಲ್ಲ ಕೊಟ್ಟು ೩ ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್‌ನಿಂದ ಒಪ್ಪಿಗೆಯೂ ಸಿಕ್ಕಿತು. ಇಷ್ಟೆಲ್ಲ ಕೋಟಲೆಗಳನ್ನು ಎದುರಿಸಿದ್ದ ಅವರಿಗೆ ತಾನೊಬ್ಬ ಭಯಂಕರ ಅದೃಷ್ಟವಂತ ಎಂದು ಗೊತ್ತಾದದ್ದು ಭಾನುವಾರ ಮಧ್ಯಾಹ್ನದ ವೇಳೆಗೆ. ಆ ಹೊತ್ತಿಗೆ ಅವರು ೨೫ ಕೋಟಿ ರೂಪಾಯಿಯ ಒಡೆಯನಾಗಿದ್ದರು. ಹೇಗೆ ಗೊತ್ತೇ? ಕೇರಳ ರಾಜ್ಯದ ಓಣಂ ಬಂಪರ್ ಲಾಟರಿ ಮೂಲಕ.
ಇದು ತಿರುವನಂತಪುರದ ಆಟೋ ಡ್ರೈವರ್ ಅನೂಪ್‌ಗೆ ಅದೃಷ್ಟ ಲಕ್ಷ್ಮೀ ಒಲಿದ ಪ್ರಸಂಗ. ಒಣಂ ಹಬ್ಬದ ಪ್ರಯುಕ್ತ ಕೇರಳ ರಾಜ್ಯ ಸರಕಾರದ ಬಂಪರ್ ಲಾಟರಿಯ ವಿಜೇತರ ಪಟ್ಟಿ ಭಾನುವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಅದರಲ್ಲಿ ೨೫ ಕೋಟಿ ರೂಪಾಯಿಯ ಮೊದಲ ಬಹುಮಾನ ಪಡೆದವರೇ ಈ ಅನೂಪ್. ಅವರು ಖರೀದಿ ಮಾಡಿದ್ದ TJ 750605 ಸಂಖ್ಯೆಯ ಲಾಟರಿ ಅವರ ಜೀನವವನ್ನೇ ಬದಲಾಯಿಸಿಬಿಟ್ಟಿದೆ.
ಆಟೋ ಓಡಿಸುವ ಜತೆಗೆ ಅಲ್ಲಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅನೂಪ್, ಕುಟುಂಬದ ಆರ್ಥಿಕ ಸಮಸ್ಯೆ ನಿವಾರಣೆಗಾಗಿ ಮಲೇಷ್ಯಾಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ, ಮಲೇಷ್ಯಾಕ್ಕೆ ಹೋಗಲು ಬೇಕಾದ ಖರ್ಚಿಗೂ ಅವರ ಬಳಿ ದುಡ್ಡು ಇರಲಿಲ್ಲ. ಹೀಗಾಗಿ ಬ್ಯಾಂಕ್ ಸಾಲದ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಬ್ಯಾಂಕ್ ಕೂಡ ಪುರಸ್ಕರಿಸಿತ್ತು. ಆದರೆ, ಭಾನುವಾರದ ಮಧ್ಯಾಹ್ನದ ವೇಳೆಗೆ ಅವರಿಗೆ ಬ್ಯಾಂಕ್‌ನವರು ಕೊಡಲಿರುವ ೩ ಲಕ್ಷ ರೂಪಾಯಿ ಜುಜುಬಿ ಎನಿಸಲಿದೆ. ಅದೇ ಬ್ಯಾಂಕ್‌ನಲ್ಲಿ ತಮಗೆ ಲಭಿಸಿದ ದೊಡ್ಡ ಮೊತ್ತವನ್ನು ಡೆಪಾಸಿಟ್ ಮಾಡುವ ತಾಕತ್ತು ಬಂದಿದೆ.
ಲೋನೂ ಬೇಡ, ಮಲೇಷ್ಯಾವೂ ಬೇಡ
ಲಾಟರಿ ಹೊಡೆದ ಖುಷಿಯಲ್ಲಿರುವ ಅನೂಪ್, ಬ್ಯಾಂಕ್‌ಗೆ ಫೋನ್ ಮಾಡಿ ನಿಮ್ಮ ಲೋನ್ ಬೇಡ ಎಂದು ಹೇಳುತ್ತಾರಂತೆ. ಅಂತೆಯೇ ಮಲೇಷ್ಯಾಗೆ ಅಡುಗೆ ಕೆಲಸಕ್ಕೆ ಹೋಗುವುದೂ ಇಲ್ಲವಂತೆ. ತಮಗೆ ಬಂದಿರುವ ಹಣದಲ್ಲೇ ಸುಂದರ ಜೀವನ ಸಾಗಿಸುವುದಾಗಿ ಮನೆಗೆ ಬಂದ ಮಾಧ್ಯಮವರ ಮುಂದೆ ಹೇಳಿಕೊಂಡಿದ್ದಾರೆ.
“ನನಗೆ ೨೫ ಕೋಟಿ ರೂಪಾಯಿ ಲಾಟರಿ ಬಂದಿರುವುದು ಗೊತ್ತಿರಲಿಲ್ಲ. ನನ್ನ ಟಿಕೆಟ್ ನಂಬರ್ ಗೊತ್ತಿದ್ದವರು ಸತತವಾಗಿ ಫೋನ್ ಮಾಡಲು ಆರಂಭಿಸಿದರು. ಬಳಿಕ ಲಾಟರಿ ಮಾಡಿದ ಏಜೆನ್ಸಿಗೆ ಫೋಟೊ ಕಳುಹಿಸಿದ ಬಳಿಕ ಅವರು ಖಾತರಿಪಡಿಸಿದರು,” ಎಂದು ಅನೂಪ್ ಹೇಳಿದ್ದಾರೆ.
ಟ್ಯಾಕ್ಸ್ ಎಲ್ಲ ಕಳೆದರೂ ಅನೂಪ್ ಖಾತೆಗೆ ಕನಿಷ್ಠ ಪಕ್ಷ ೧೫ ಕೋಟಿ ರೂಪಾಯಿ ಜಮಾ ಆಗಲಿದೆ. ಈ ದುಡ್ಡನ್ನು ಏನು ಮಾಡುವಿರಿ ಎಂದು ಕೇಳಿದ ಪ್ರಶ್ನೆಗೆ, “ಮೊದಲೊಂದು ಸುಂದರವಾದ ಮನೆ ಕಟ್ಟುವೆ. ಅಳಿದುಳಿದ ಸಾಲವನ್ನು ತೀರಿಸುವೆ. ಉಳಿದ ಹಣದಲ್ಲಿ ಉತ್ತಮ ಜೀವನ ನಡೆಸುವೆ,” ಎಂದು ಅನೂಪ್ ಹೇಳಿದ್ದಾರೆ.
ಅಂದ ಹಾಗೆ ಅನೂಪ್ ಈ ಹಿಂದೆಯೂ ಸಾಕಷ್ಟು ಲಾಟರಿಗಳನ್ನು ಖರೀದಿ ಮಾಡಿದ್ದರಂತೆ. ಅವುಗಳಲ್ಲಿ ಅವರಿಗೆ ಬಂದಿರುವ ಗರಿಷ್ಠ ಬಹುಮಾನ ೫೦೦೦ ಸಾವಿರ ರೂಪಾಯಿ. ಇಷ್ಟೆಲ್ಲ ದುಡ್ಡು ಬಂದ ಬಳಿಕವೂ ಲಾಟರಿ ಖರೀದಿ ಮಾಡುವುದನ್ನು ನಿಲ್ಲಿಸುವಿರೇ ಎಂದು ಕೇಳಿದ್ದಕ್ಕೆ, ಟಿಕೆಟ್ ಖರೀದಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಕಳೆದ ಬಾರಿಯೂ ರಿಕ್ಷಾ ಡ್ರೈವರ್‌ಗೆ ಒಲಿದಿತ್ತು ಅದೃಷ್ಟ
ಕಳೆದ ವರ್ಷದ ಓಣಂ ಬಂಪರ್ ಬಹುಮಾನ ೧೫ ಕೋಟಿ ರೂಪಾಯಿಗಳಾಗಿತ್ತು. ಕಾಕತಾಳಿಯವೆಂದರೆ, ಅದು ಕೂಡ ಕೊಚ್ಚಿಯ ಮರ್ಡೂರ್‌ನ ಆಟೋ ರಿಕ್ಷಾ ಡ್ರೈವರ್ ಜಯಪಾಲನ್ ಎಂಬುವರಿಗೆ ಒಲಿದಿತ್ತು.
ಕೇರಳದ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲನ್ ಅವರು ಭಾನುವಾರ ಮಧ್ಯಾಹ್ನ ಲಕ್ಕಿ ಡ್ರಾ ನಡೆಸಿದ್ದರು. ಈ ಬಾರಿ ಎರಡನೇ ಬಹುಮಾನ ೫ ಕೋಟಿ ರೂಪಾಯಿ ಹಾಗೂ ೧೦ ಮಂದಿ ತಲಾ ೧ ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. 5 ಲಕ್ಷ, ಒಂದು ಲಕ್ಷ, ೫೦೦೦ ರೂಪಾಯಿ, ೩೦೦೦ ರೂಪಾಯಿ, ೨೦೦೦ ಹಾಗೂ ೧೦೦೦ ರೂಪಾಯಿ ಬಹುಮಾನಗಳನ್ನು ಹಲವು ಮಂದಿ ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ | ಕೇರಳದಲ್ಲಿ ಓಣಂ ಲಾಟರಿಯ ಮೊದಲ ಬಹುಮಾನ ಮೊತ್ತ 25 ಕೋಟಿ ರೂ.ಗೆ ಏರಿಕೆ