ನವದೆಹಲಿ: ಪ್ರಜಾಪ್ರಭುತ್ವದ ಉಳಿವಿಗಾಗಿ (Save Democracy) ಸರ್ವಾಧಿಕಾರದ ಸರ್ಕಾರವನ್ನು ಕಿತ್ತೊಗೆಯಲು ಯಾವುದೇ ಸಿದ್ಧಾಂತವಿರಲಿ, ನಾಗರಿಕರೆಲ್ಲರೂ ಒಟ್ಟಾಗಿ ಹೋರಾಟ ಮಾಬೇಕಿದೆ ಎಂದು ಕಾಂಗ್ರೆಸ್ (Congress Party) ಕರೆ ನೀಡಿದೆ. ಹೈದ್ರಾಬಾದ್‌ನಲ್ಲಿ (Hyderabad) ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು (Congress CWC Meet) ಆಯೋಜಿಸಲಾಗಿದೆ. ಭಾನುವಾರ ಸಮಿತಿಯ ಸಭೆಯ ಎರಡನೇ ದಿನವಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲ ಸ್ತರದ ನಾಯಕರು ಮತ್ತು ಕಾರ್ಯಕರ್ತರು ನಿಗದಿತವಾಗಿ ಸಭೆ ಸೇರಿ, ಜನರ ಸಮಸ್ಯೆಗಳನ್ನು ಆಲಿಸಬೇಕು. ಮುಂದಿನ ವರ್ಷ ಪಕ್ಷವು ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಸೋನಿಯಾ ಗಾಂಧಿ (Sonia Gandhi) ಅವರು, ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಲು ಹೋಗಬಾರದು ಎಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ನಾವೀಗ ವಿಶ್ರಾಂತಿ ಮಾಡುವ ಸಮಯವಲ್ಲ. ಕಳೆದ ಹತ್ತು ವರ್ಷ ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು ದುಪ್ಪಟ್ಟವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರ ಸಮಸ್ಯೆಗಳನ್ನು ಆಲಿಸಲು ನಿರಾಕರಿಸುತ್ತಿದ್ದಾರೆ, ಅವರಿಗೆ ತಮ್ಮನ್ನು ಬಿಟ್ಟು ಬೇರೆ ಯಾರೂ ಕಾಣುವುದಿಲ್ಲ ಎಂದು ಖರ್ಗೆ ಅವರು ಟೀಕಿಸಿದರು.
ಸರ್ವಾಧಿಕಾರದ ಆಡಳಿತದಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ನಾವು ಒಗ್ಗೂಡಬೇಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಈ ಸರ್ವಾಧಿಕಾರದ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಇದೇ ವೇಳೆ ಸೋನಿಯಾ ಗಾಂಧಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಬಾರದು. ಸ್ವಯಂ ನಿಯಂತ್ರಣವನ್ನು ಹಾಕಿಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಅವರು ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷವು, ಯಾವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಮಾತನಾಡಬಾರದು ಎಂಬ ಪಟ್ಟಿಯನ್ನು ರಿಲೀಸ್ ಮಾಡಿದೆ.
ಈ ಸುದ್ದಿಯನ್ನೂ ಓದಿ: CWC meet : ಒಂದು ದೇಶ ಒಂದು ಚುನಾವಣೆಗೆ ವಿರೋಧ, ಇನ್ನೇನಿವೆ ಕಾಂಗ್ರೆಸ್ನ ಕಾರ್ಯಸೂಚಿಗಳು?
ನಮ್ಮ ಎಲ್ಲ ವೈಯಕ್ತಿಕ ಆಸಕ್ತಿಗಳನ್ನು ಬದಿಗಿಟ್ಟು ನಾವು ವಿಶ್ರಾಂತಿರಹಿತವಾಗಿ ಕೆಲಸ ಮಾಡಬೇಕು. ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪಕ್ಷದ ಯಶಸ್ಸೇ ನಮ್ಮ ಆದ್ಯತೆಯಾಗಬೇಕು. ಒಗ್ಗಟ್ಟು ಮತ್ತು ಶಿಸ್ತು ಮೂಲಕವೇ ನಮ್ಮ ನಮ್ಮ ವಿರೋಧಿಗಳನ್ನು ಸೋಲಿಸಲು ಸಾಧ್ಯ. ಇದಕ್ಕೆ ಕರ್ನಾಟಕದ ಗೆಲುವು ಸಾಕ್ಷಿಯಾಗಿದೆ. ಕರ್ನಾಟಕ ಚುನಾವಣೆಯಲ್ಲಿ ನಾವು ಯಶಸ್ಸಿಗಾಗಿ ಎಲ್ಲರು ಒಂದಾಗಿ ಮತ್ತು ಶಿಸ್ತು ಮೂಲಕ ಹೋರಾಟ ನಡೆಸಿದ್ದೆವು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.