Site icon Vistara News

Ayodhya Mosque: ಅಯೋಧ್ಯೆ ಮಸೀದಿಯ ವಿನ್ಯಾಸವೇ ದಿಢೀರ್‌ ಬದಲು; ಏನಿದಕ್ಕೆ ಕಾರಣ?

Ayodhya Mosque

Ayodhya mosque's design changed, to resemble big ones in Middle East: IICF

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜನವರಿಯಲ್ಲಿ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ (Ram Lalla) ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ರಾಮಮಂದಿರ (Ram Mandir) ಟ್ರಸ್ಟ್‌ ತೀರ್ಮಾನಿಸಿದೆ. ಇದರ ಬೆನ್ನಲ್ಲೇ, ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಸೀದಿಯ (Ayodhya Mosque) ವಿನ್ಯಾಸವನ್ನು ಬದಲಾಯಿಸಲಾಗಿದೆ.

“ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯ ವಿನ್ಯಾಸವನ್ನು ಬದಲಾಯಿಸಲಾಗಿದೆ. ಮಧ್ಯ ಏಷ್ಯಾ ದೇಶಗಳಲ್ಲಿರುವ ಮಸೀದಿಗಳಂತೆಯೇ ಅಯೋಧ್ಯೆ ಮಸೀದಿಯನ್ನೂ ನಿರ್ಮಿಸಲಾಗುತ್ತದೆ. ಹಾಗಾಗಿ, ಮಸೀದಿಯ ವಿನ್ಯಾಸವನ್ನು ಬದಲಾಯಿಸಲಾಗಿದೆ” ಎಂದು ಇಂಡೋ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್ (IICF) ಅಧ್ಯಕ್ಷ ಜುಫರ್‌ ಫಾರೂಕಿ ಮಾಹಿತಿ ನೀಡಿದ್ದಾರೆ. ಮಸೀದಿಗೆ ಪ್ರವಾದಿ “ಮೊಹಮ್ಮದ್‌ ಬಿನ್‌ ಅಬ್ದುಲ್ಲಾ” ಎಂಬ ಹೆಸರಿಡಲು ತೀರ್ಮಾನಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ

“ಮಸೀದಿ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸಲಾಗಿದೆ. ಮುಂಬೈನಲ್ಲಿ ನಡೆದ ಸಭೆಯಲ್ಲಿ ಹೊಸ ವಿನ್ಯಾಸಕ್ಕೆ ಅನುಮೋದನೆ ದೊರೆತಿದೆ. ಪುಣೆ ಮೂಲದ ವಾಸ್ತುಶಿಲ್ಪಿಯು ಹೊಸ ವಿನ್ಯಾಸ ತಯಾರಿಸಿದ್ದಾರೆ. ಮಸೀದಿ ಜತೆಗೆ 300 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲಾಗುತ್ತದೆ” ಎಂದು ತಿಳಿಸಿದ್ದಾರೆ. ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಶಿಯಾ, ಸುನ್ನಿ, ದಿಯೋಬಂದ್‌, ಬರೇಲ್ವಿ ಮುಸ್ಲಿಂ ಪಂಗಡಗಳ ನಾಯಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್‌ ಸಿಟಿʼ ನಿಮಗಾಗಿಯೇ ಇದೆ!

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹಾಗೆಯೇ, ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಇದರ ಬೆನ್ನಲ್ಲೇ, ಭವ್ಯ ಮಸೀದಿಯ ನಿರ್ಮಾಣಕ್ಕೂ ಸಿದ್ಧತೆ ನಡೆಯುತ್ತಿವೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡಲಾಗಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಅರ್ಚಕರು, ಸಿಬ್ಬಂದಿ ಸಂಬಳ 40% ಹೆಚ್ಚಳ; ಇವರ ವೇತನ ಎಷ್ಟು?

ಇನ್ನು, ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

Exit mobile version