ಅಯೋಧ್ಯೆ: ಜನವರಿ 22ರಂದು ರಾಮ ಮಂದಿರದ (Ayodhya Ram Mandir) `ಪ್ರಾಣ ಪ್ರತಿಷ್ಠಾ’ (Pran Pratishta) ಸಮಾರಂಭಕ್ಕೆ ಬಿಗಿ ಭದ್ರತೆಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಅಯೋಧ್ಯೆಯಲ್ಲಿ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದೆ.
ಉತ್ತರ ಪ್ರದೇಶದ ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಗುರುವಾರ, ಅಯೋಧ್ಯಾ ಜಿಲ್ಲೆಯಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳವು ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದೆ. ಈ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
“ರಾಜ್ಯ ಸರ್ಕಾರ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಸೂಚನೆಗಳ ಮೇರೆಗೆ ನಡೆಸುತ್ತಿರುವ ತಪಾಸಣೆ ಅಭಿಯಾನದ ಭಾಗವಾಗಿ, ಅಯೋಧ್ಯೆ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಎಟಿಎಸ್ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ, ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಸಂಪರ್ಕ ಬೆಳಕಿಗೆ ಬಂದಿಲ್ಲ” ಎಂದು ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶ ಸರ್ಕಾರವು ಡ್ರೋನ್‌ಗಳ ಮೂಲಕ ದೇಗುಲ ಪ್ರದೇಶದಲ್ಲಿ ಹಾಗೂ ನಗರದ ವಿವಿಧ ಕಡೆ ಕಣ್ಗಾವಲು ಇಟ್ಟಿದ್ದು, ಭದ್ರತೆಯನ್ನು ಬಿಗಿಗೊಳಿಸಿದೆ. ನಗರದಾದ್ಯಂತ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ರಾತ್ರಿ ದೃಷ್ಟಿ ಸಾಧನಗಳು (NVD) ಮತ್ತು CCTV ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದೆ.
“ಭದ್ರತೆಗಾಗಿ ಎನ್‌ವಿಡಿ, ಇನ್‌ಫ್ರಾರೆಡ್ ಕ್ಯಾಮೆರಾಗಳು, ಸಿಸಿಟಿವಿ, ಡ್ರೋನ್‌ಗಳು ಸೇರಿದಂತೆ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ನಾವು ಅಳವಡಿಸಿದ್ದೇವೆ” ಎಂದು ಅಯೋಧ್ಯೆ ಐಜಿ ಪ್ರವೀಣ್ ಕುಮಾರ್ ಹೇಳಿದ್ದಾರೆ. “ನಗರದಲ್ಲಿ ಯಾವುದೇ ಅಸಾಮಾನ್ಯ ಚಟುವಟಿಕೆ ಅಥವಾ ಅನುಮಾನಾಸ್ಪದ ವಸ್ತುವನ್ನು ಪತ್ತೆಹಚ್ಚಲು ಡ್ರೋನ್‌ಗಳ ಮೂಲಕ ನಿಗಾ ಇಡುತ್ತಿದ್ದೇವೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ. ಕಟ್ಟಡಗಳು ಮತ್ತು ಮನೆಗಳ ಮೇಲ್ಛಾವಣಿಯನ್ನೂ ಸಹ ಗಮನಿಸಲಾಗುತ್ತಿದೆ ಎಂದಿದ್ದಾರೆ.
ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಗಣ್ಯರು ಹಾಗೂ ಸಮಾಜದ ಎಲ್ಲ ವರ್ಗದ ಜನರು ಆಗಮಿಸಲಿದ್ದಾರೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22ರಂದು ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಸಮಾರಂಭದ ಮುಖ್ಯ ವಿಧಿಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14ರಿಂದ ಜನವರಿ 22ರವರೆಗೆ ಅಯೋಧ್ಯೆಯು ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ.
ಇದನ್ನೂ ಓದಿ: Ayodhya Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆ; ದೆಹಲಿಯ ಬ್ಯಾಂಡ್‌ಗಳಿಗೆ ಹೆಚ್ಚಿದ ಬೇಡಿಕೆ