ಅಯೋಧ್ಯೆ: ರಾಮಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ (Ram lalla) ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ (Pran prathishta) ನಡೆಯುವ ಜನವರಿ 22 ಅತ್ಯಂತ ಮಹತ್ವದ ದಿನ ಎನಿಸಿಕೊಂಡಿದೆ. ಸಂಖ್ಯಾ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಪಂಚಾಂಗದ ಪ್ರಕಾರ ಜ. 22 ದಿನಾಂಕಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಅದೇನು ಎನ್ನುವುದರ ವಿವರ ಇಲ್ಲಿದೆ.
ಪಂಚಾಂಗ
ಮಿಥಿಲಾ ಪಂಚಾಂಗದ ಪ್ರಕಾರ, ಸೋಮವಾರದ ಅಧಿಪತಿ ಚಂದ್ರ. ಸೂರ್ಯೋದಯ ಮತ್ತು ಪ್ರಾಣ ಪ್ರತಿಷ್ಠೆ ವೇಳೆ ಶುಕ್ಲ ಪಕ್ಷದ ದ್ವಾದಶಿ ತಿಥಿ ನಡೆಯಲಿದೆ. ಅಲ್ಲದೆ ಅದೇ ದಿನ ರಾತ್ರಿ ತ್ರಯೋದಶಿ ತಿಥಿಯ ಛಾಯೆ ಕೂಡ ತನ್ನ ಪ್ರಭಾವ ಬೀರಲಿದೆ. ಅಂದು ಸಂಜೆ 7.50ಕ್ಕೆ ತ್ರಯೋದಶಿ ತಿಥಿ ಆರಂಭವಾಗಲಿದೆ. ಆ ದಿನ ಚಂದ್ರ ಮೃಗಶಿರ ನಕ್ಷತ್ರದಲ್ಲಿ ಇರಲಿದ್ದಾನೆ. ಮೃಗಶಿರ ನಕ್ಷತ್ರವನ್ನು ಅತ್ಯಂತ ಪರಿಶುದ್ಧವೆಂದು ಪರಿಗಣಿಸಲಾಗುತ್ತದೆ. ಮಂಗಳನಿಂದ ಆಳಲ್ಪಡುವ ಮೃಗಶಿರವು ಚಟುವಟಿಕೆ ಮತ್ತು ನಿರಂತರ ಚಲನೆಯಿಂದ ನಿರೂಪಿಸಲ್ಪಟ್ಟಿದೆ. ಹಿಂದೂ ಸಂಪ್ರದಾಯವು ಮೃಗಶಿರವನ್ನು ವಿವಿಧ ಆಚರಣೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತದೆ. ಪ್ರಾಣ ಪ್ರತಿಷ್ಠೆ ವೇಳೆ ಇಂದ್ರ ಯೋಗ ಮತ್ತು ಬಲವ ಕರಣ ಸಕ್ರಿಯವಾಗಿರುತ್ತದೆ. ಅಲ್ಲದೆ ಆ ದಿನ ಪೂರ್ತಿ ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ಇರಲಿದೆ.
ಜ್ಯೋತಿಷ್ಯ ಶಾಸ್ತ್ರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನವರಿ 22ರಂದು ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಯಾವುದೇ ಶುಭ ಕಾರ್ಯವನ್ನು ಮಾಡಲು ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯೋಗಗಳಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಎಲ್ಲ ರೀತಿಯ ಯಶಸ್ಸನ್ನು ದೊರೆಯಲಿದೆ ಎಂದು ಹೇಳಲಾಗಿದೆ.
ಸಂಖ್ಯಾ ಶಾಸ್ತ್ರ
ಸಂಖ್ಯಾ ಶಾಸ್ತ್ರದ ಪ್ರಕಾರವೂ ಗ್ರೆಗೋರಿಯನ್ ಕ್ಯಾಲೆಂಡರ್‌ನ ಜನವರಿ 22 ದಿನಾಂಕ ಹಲವು ವಿಶೇಷತೆಗಳಿಂದ ಕೂಡಿದೆ. 2024ರ ಜ. 22 ಅಂದರೆ ಹುಟ್ಟಿದ ದಿನ 4 ಎಂದಾಗುತ್ತದೆ. ಅಲ್ಲದೆ 22 ಎನ್ನುವುದು ಕನಸು ನನಸಾಗುವ ಸಂಖ್ಯೆ ಎಂದು ನಂಬಲಾಗಿದೆ. ಅಂದರೆ ಕೋಟ್ಯಂತರ ಮಂದಿಯ ರಾಮ ಮಂದಿರದ ಕನಸು ಪ್ರಾಣ ಪ್ರತಿಷ್ಠೆ ಮೂಲಕ ನನಸಾಗುವುದನ್ನು ಈ ಸಂಖ್ಯೆ ಪ್ರತಿನಿಧಿಸುತ್ತದೆ. 22 ಸುಖ, ಸಮೃದ್ಧಿ, ಯಶಸ್ಸು ಮತ್ತು ಧಾರ್ಮಿಕತೆಯ ಸಂಕೇತವಾಗಿಯೂ ಪರಿಗಣಿಸಲ್ಪಡುತ್ತದೆ.
ಇದನ್ನೂ ಓದಿ: Ayodhya Ram Mandir: ರಾಮ ಮಂದಿರದಲ್ಲಿ ಮಂಡಲ ಪೂಜೆಗೆ ರಾಯಚೂರಿನ ವೈದಿಕರ ತಂಡ ಆಯ್ಕೆ
ಮಹತ್ವದ ದಿನವಾಗಿ ಬದಲಾಗಲಿದೆ
ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22 ಇನ್ನು ಮುಂದೆ ಮಹತ್ವದ ದಿನವಾಗಿ ಜಗತ್ತಿನಾದ್ಯಂತ ಗುರುತಿಸಲ್ಪಡಲಿದೆ. ಯೋಗ ದಿನದಂತೆ ಪ್ರತಿಷ್ಠಾ ದಿನವೂ ಮುಂದಿನ ದಿನಗಳಲ್ಲಿ ಜನಪ್ರಿಯವಾಗಲಿದೆ ಎನ್ನುತ್ತಾರೆ ತಜ್ಞರು. ಹೊಸ ಭಾರತ ಉದಯವಾದ ದಿನವಾಗಿಯೂ ಜ. 22 ಗುರುತಿಸಲ್ಪಡಲಿದೆ. ಅಲ್ಲದೆ ಧಾರ್ಮಿಕ ಪ್ರವಾಸೋದ್ಯಮ, ಯೋಗ, ಧ್ಯಾನ, ಜ್ಯೋತಿಷ್ಯ ಶಾಸ್ತ್ರ ಸೇರಿದಂತೆ ಸಂಬಂಧಿತ ಕ್ಷೇತ್ರಗಳಲ್ಲಿಯೂ ಗಣನೀಯ ವರ್ಧನೆ ದಾಖಲಾಗಲಿದೆ. ಆರ್ಥಿಕ ಕ್ಷೇತ್ರದಲ್ಲಿಯೂ ಚೇತರಿಕೆ ಕಂಡು ಬರಲಿದೆ ಎಂದು ತಜ್ಞರು ಊಹಿಸಿದ್ದಾರೆ. ಒಟ್ಟಿನಲ್ಲಿ ಜ. 22 ಎನ್ನುವುದು ಆಧುನಿಕ ಭಾರತದ ಚಿತ್ರಣವನ್ನೇ ಬದಲಿಸಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ