Site icon Vistara News

Ayodhya Ram Mandir: ರಾಮ ಲಲ್ಲಾ ವಿಗ್ರಹದ ಬಣ್ಣ ಕುರಿತು ಕಾಂಗ್ರೆಸ್ ಶಾಸಕನ ಟೀಕೆ, ಉತ್ತರಾಖಂಡದಲ್ಲಿ ಗದ್ದಲ

balak ram

balak ram

ಡೆಹ್ರಾಡೂನ್:‌ ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಸ್ಥಾಪಿಸಲಾಗಿರುವ ಬಾಲಕ ರಾಮ (Balak Ram) ವಿಗ್ರಹದ ಬಣ್ಣದ ಕುರಿತು ಕಾಂಗ್ರೆಸ್ ಶಾಸಕರೊಬ್ಬರು ಉತ್ತರಾಖಂಡ ವಿಧಾನಸಭೆಯಲ್ಲಿ ಮಾಡಿದ ಟೀಕೆ ಉಭಯ ಪಕ್ಷಗಳ ಶಾಸಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಜಸ್ಪುರದ ಕಾಂಗ್ರೆಸ್ ಶಾಸಕ ಆದೇಶ್ ಸಿಂಗ್ ಚೌಹಾಣ್ ಅವರು ರಾಮ್ ಲಲ್ಲಾ ವಿಗ್ರಹದ ಬಣ್ಣದ ಬಗ್ಗೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಆಕ್ಷೇಪಿಸಿದರು.

“ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಮನು ʼಸನ್‌ವಾಲಾ’ (ನೀಲ ವರ್ಣದವನು) ಆಗಿದ್ದ. ಆದರೆ ನೀವು ಅಯೋಧ್ಯೆಯ ದೇವಾಲಯದಲ್ಲಿ ಸ್ಥಾಪಿಸಲಾದ ರಾಮಲಲ್ಲಾ ವಿಗ್ರಹವನ್ನು ಕಪ್ಪು ಮಾಡಿದ್ದೀರಿ” ಎಂದು ಚೌಹಾಣ್ ಹೇಳಿದರು. ಈ ಹೇಳಿಕೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿ ಸಚಿವರು ಮತ್ತು ಇತರ ಶಾಸಕರು ಚೌಹಾಣ್‌ ಅವರನ್ನು ಆಕ್ಷೇಪಿಸಿದರು.

ಈ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರೇಮಚಂದ್ ಅಗರ್ವಾಲ್, ಕಾಂಗ್ರೆಸ್ ಸದಸ್ಯರಿಗೆ ಯುಸಿಸಿ ಮಸೂದೆಯ ಬಗ್ಗೆ ಮಾತ್ರ ಮಾತನಾಡುವಂತೆ ಹೇಳಿದರು. “ನೀವು ಭಗವಾನ್ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು” ಎಂದು ಅವರು ಹೇಳಿದರು. ʼಕಾಂಗ್ರೆಸ್ ರಾಮನ ಅಸ್ತಿತ್ವವನ್ನೇ ನಿರಾಕರಿಸಿದ ಪಕ್ಷʼ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಸದನದಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳೂ ಮೊಳಗಿದವು. ಸ್ಪೀಕರ್ ರಿತು ಖಂಡೂರಿಯವರ ಮಧ್ಯಪ್ರವೇಶದ ನಂತರ ಗಲಾಟೆ ಶಮನಗೊಂಡಿತು. ಅವರು ಕಾಂಗ್ರೆಸ್ ಶಾಸಕರನ್ನು ಯುಸಿಸಿ ಕುರಿತ ಚರ್ಚೆಯಿಂದ ದೂರ ಸರಿಯದಂತೆ ಕೇಳಿಕೊಂಡರು.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದನ್ನು ನೆರವೇರಿಸಿದ್ದರು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ರಾಮನ ಮೂರ್ತಿ ಬಾಲಕ ರಾಮನಾಗಿ ಅಯೋಧ್ಯೆಯಲ್ಲಿ ಕಂಗೊಳಿಸುತ್ತಿದೆ.

ಇದನ್ನೂ ಓದಿ: Ayodhya Ram Mandir: ರಾಮ ಲಲ್ಲಾ ಹೆಸರು ಬದಲಾಯಿತು; ಇನ್ನಿವನು ʼಬಾಲಕ ರಾಮʼ

Exit mobile version