Site icon Vistara News

Ayodhya Ram Mandir: ರಾಮ ಮಂದಿರದಲ್ಲಿರುತ್ತೆ ವಿಶ್ವದ ಅತ್ಯಂತ ದುಬಾರಿ ರಾಮಾಯಣ; ಏನಿದರ ಮೌಲ್ಯ?

ramayana book costly

ಅಯೋಧ್ಯೆ: ಸೋಮವಾರ ನಡೆಯಲಿರುವ ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾ (Pran Pratishta) ಸಮಾರಂಭದ ಸಮಯದಲ್ಲಿ ವಿಶ್ವದ ಅತ್ಯಂತ ದುಬಾರಿ ಮೌಲ್ಯದ ರಾಮಾಯಣ ಕೃತಿಯೊಂದನ್ನು ನೀವು ಕಾಣಬಹುದಾಗಿದೆ.

ಈ ರಾಮಾಯಣ ಕೃತಿಯನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದು, ಪುಸ್ತಕ ಮಾರಾಟಗಾರ ಮನೋಜ್ ಸತಿ ಈ ವಿಶೇಷ ಆವೃತ್ತಿಯನ್ನು ಅಯೋಧ್ಯೆಗೆ ತಂದಿದ್ದಾರೆ. ಇದನ್ನು ವಿಶೇಷವಾಗಿ ರಾಮ ಮಂದಿರ ಉದ್ಘಾಟನೆ ಸಂದರ್ಭಕ್ಕಾಗಿಯೇ ಅಚ್ಚು ಹಾಕಲಾಗಿದೆ.

ಅಂದವಾಗಿ ರಚಿಸಲಾದ ಈ ಪುಸ್ತಕದ ವಿನ್ಯಾಸ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮೂರು ಮಹಡಿಗಳನ್ನು ಪ್ರತಿಬಿಂಬಿಸುತ್ತದೆ. ಈ ರಾಮಾಯಣ ಕೃತಿಯ ಹೊರಗಿನ ಪೆಟ್ಟಿಗೆಗೆ ಅಮೇರಿಕನ್ ಆಕ್ರೋಟ್‌ ಮರವನ್ನು ಬಳಸಲಾಗಿದೆ. ಪುಸ್ತಕ ಮೂರು ಭಾಗಗಳಲ್ಲಿದ್ದು, ದೊಡ್ಡ ಪೆಟ್ಟಿಯ ಮೂರು ವಿಭಾಗಗಳಲ್ಲಿ ಇದನ್ನು ಇಡಲಾಗಿದೆ. ಪೆಟ್ಟಿಗೆ ಮುಚ್ಚಳ 360 ಡಿಗ್ರಿಗಳಷ್ಟು ತಿರುಗುವಂತಿದ್ದು, ಅದನ್ನು ವ್ಯಾಸಪೀಠದಂತೆ ಪುಸ್ತಕ ಇಟ್ಟು ಓದಲು ಬಳಸುವಂತಿದೆ.

ಪುಸ್ತಕದ ಮುಖಪುಟವನ್ನು ಆಮದು ಮಾಡಿಕೊಳ್ಳಲಾದ ವೀಶೇಷ ಬಗೆಯ ಕಾಗದದಿಂದ ರೂಪಿಸಲಾಗಿದೆ. ಮುಖಪುಟ ಹಾಗೂ ಒಳಪುಟಗಳಲ್ಲಿ ಸುಂದರವಾದ ಚಿತ್ರಗಳಿವೆ. ಒಳಪುಟಗಳಿಗೆ ಫ್ರೆಂಚ್ ನಿರ್ಮಾಣದ, ಆಮ್ಲ-ಮುಕ್ತ, ಪೇಟೆಂಟ್ ಪೇಪರ್ ಅನ್ನು ಬಳಸಲಾಗಿದೆ. ಮುದ್ರಣಕ್ಕೆ ಬಳಸಿರುವ ಶಾಯಿ ಕೂಡ ಜಪಾನ್‌ ಮೂಲದ್ದು ಹಾಗೂ ಸಾವಯವ. ಆವೃತ್ತಿಯ ಪ್ರತಿಯೊಂದು ಪುಟವೂ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು, ಪ್ರತಿ ಪುಟವೂ ಓದುಗರಿಗೆ ಹೊಸ ಅನುಭವವನ್ನು ನೀಡುತ್ತದೆ.

“ನಾವು ನಮ್ಮ ಸುಂದರ ರಾಮಾಯಣದೊಂದಿಗೆ ಇಲ್ಲಿಗೆ ಬಂದಿದ್ದೇವೆ. ಅಯೋಧ್ಯೆಯ ಟೆಂಟ್ ನಗರದಲ್ಲಿ ಇಡಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ರಾಮಾಯಣವಾಗಿದೆ” ಎಂದು ಸತಿ ತಿಳಿಸಿದ್ದಾರೆ. “ಇದರ ಮೌಲ್ಯ ₹1.65 ಲಕ್ಷ. ಈ ಪುಸ್ತಕ 400 ವರ್ಷಗಳವರೆಗೆ ಉಳಿಯುತ್ತದೆ. ಸುಂದರವಾದ ಪುಸ್ತಕದ ಕಪಾಟು ಇರುವುದರಿಂದ ಇದು ಸುರಕ್ಷಿತವಾಗಿ ಉಳಿಯುತ್ತದೆ. ಈ ಪುಸ್ತಕವನ್ನು ನಾಲ್ಕು ತಲೆಮಾರುಗಳು ಓದಬಹುದು” ಎಂದು ಅವರು ಹೇಳಿದರು.

ಬಹು ನಿರೀಕ್ಷಿತ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜನವರಿ 22ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾ ಕಾರ್ಯಕ್ರಮಕ್ಕೆ ಸಂತರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನರನ್ನು ಆಹ್ವಾನಿಸಲಾಗಿದೆ. ಪುರೋಹಿತರ ತಂಡದೊಂದಿಗೆ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನಡೆಸಲಿದ್ದಾರೆ.

ಏಳು ದಿನಗಳ ವೈದಿಕ ಆಚರಣೆಗಳು ಅಯೋಧ್ಯೆಯಲ್ಲಿ ಕಳೆದ ಮಂಗಳವಾರ ಪ್ರಾರಂಭವಾಯಿತು. ಶನಿವಾರ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಿದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆಯಲಾಗುತ್ತದೆ. ಇದರ ನಂತರ ‘ವಾಸ್ತು ಶಾಂತಿ’ ಮತ್ತು ‘ಅನ್ನಾಧಿವಾಸ್’ ಆಚರಣೆಗಳು ನಡೆಯಲಿವೆ.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಇನ್ನೊಬ್ಬ ಕನ್ನಡಿಗ ಕೆತ್ತಿದ ಮೂರ್ತಿ! ಯಾವುದದು ನೋಡಿ

Exit mobile version