Site icon Vistara News

Ayodhya Ram Mandir: ಅಯೋಧ್ಯೆಯ ಜತೆಗೆ ಒಡಿಶಾದ ಈ ರಾಮ ದೇಗುಲವೂ ಇಂದೇ ಉದ್ಘಾಟನೆ

odisha ram temple

odisha ram temple

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ ದೇಗುಲದಲ್ಲಿ ರಾಮ ಲಲ್ಲಾ (Ram lalla) ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡುವ ಮೂಲಕ ಕೋಟ್ಯಂತರ ಭಕ್ತರ ಕನಸು ನನಸಾಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಇತ್ತ ಒಡಿಶಾದಲ್ಲಿಯೂ ಇಂದೇ (ಜನವರಿ 22) ರಾಮ ದೇಗುಲದ ಉದ್ಘಾಟನೆ ನಡೆಯಲಿದೆ.

ಎಲ್ಲಿದೆ?

ಒಡಿಶಾದ ನಯಾಗರ್ ಜಿಲ್ಲೆಯ ಫತೇಘರನ್‌ನಲ್ಲಿ ನಿರ್ಮಾಣಗೊಂಡಿರುವ 73 ಅಡಿ ಎತ್ತರದ ರಾಮನ ದೇವಾಲಯ ಇದಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1,600 ಅಡಿ ಎತ್ತರದಲ್ಲಿದೆ. ಭಕ್ತರು ಮತ್ತು ಸಾರ್ವಜನಿಕರ ದೇಣಿಗೆಯಿಂದ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಈ ದೇಗುಲವನ್ನು ಬೌಲಾಮಾಲಾ ಕಲ್ಲಿನಿಂದ ನಿರ್ಮಿಸಲಾಗಿದೆ. ಹಸುರು ಪರಿಸರದ ಮಧ್ಯೆ ಈ ರಾಮ ಮಂದಿರ ತಲೆ ಎತ್ತಿ ನಿಂತಿದೆ.

2017ರಲ್ಲಿ ಈ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ದೇವಾಲಯವನ್ನು ಪೂರ್ಣಗೊಳಿಸಲು 150 ಕ್ಕೂ ಹೆಚ್ಚು ಕುಶಲಕರ್ಮಿಗಳು ಕಾರ್ಯ ನಿರತರಾಗಿದ್ದರು. ಸದ್ಯ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಯೂ ಬದಲಾಗಿದೆ. ʼʼಇದು ನಮ್ಮ ಹೆಮ್ಮೆಯ ದೇವಸ್ಥಾನ. ಸಾರ್ವಜನಿಕರು ಮತ್ತು ಭಕ್ತರ ದೇಣಿಗೆಯಿಂದ ನಮ್ಮ ಗ್ರಾಮದಲ್ಲಿ ಭಗವತಂತ ರಾಮನಿಗೆ ದೇವಸ್ಥಾನ ನಿರ್ಮಿಸಿದ್ದೇವೆ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆʼʼ ಎಂದು ಸ್ಥಳೀಯರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಏನೆಲ್ಲ ಧಾರ್ಮಿಕ ವಿಧಿ-ವಿಧಾನ ?

ದೇಗುಲದ ಉದ್ಘಾಟನೆ ಪ್ರಯುಕ್ತ ಯಜ್ಞ, ವೇದ ಪಠಣ ಆಯೋಜಿಸಲಾಗಿದೆ. ಮುಂಜಾನೆ ಸೂರ್ಯ ಪೂಜೆಯ ಮೂಲಕ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದೆ. ಸುಮಾರು 5.5 ಅಡಿ ಎತ್ತರದ ಶ್ರೀ ರಾಮ, ಸೀತಾ ಮತ್ತು ಲಕ್ಷ್ಮಣ ವಿಗ್ರಹವನ್ನು ರಾಜಸ್ಥಾನದಿಂದ ತರಿಸಲಾಗಿದೆ. ವಿವಿಧ ಸಂಪ್ರದಾಯ, ಪೂಜೆಯ ಮೂಲಕ ಈ ವಿಗ್ರಹಗಳನ್ನು ಪ್ರತಿಷ್ಠೆ ಮಾಡಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ. ಈ ಸಮಾರಂಭಕ್ಕೆ ಪುರಿ ಶಂಕರಾಚಾರ್ಯ ಮತ್ತು ಗಜಪತಿ ಮಹಾರಾಜ ದಿಬ್ಯಸಿಂಘ ದೇಬ್ ಅವರನ್ನು ಫತೇಘರ್ ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ.

ಇದನ್ನೂ ಓದಿ: Ram Mandir: ಪ್ರಾಣ ಪ್ರತಿಷ್ಠೆ ಎಂದರೇನು? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ಅರ್ಧ ದಿನ ರಜೆ ಘೋಷಿಸಿದ ಒಡಿಶಾ ಸರ್ಕಾರ

ಅಯೋಧ್ಯೆ ರಾಮ ಮಂದಿರಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭದ ಪ್ರಯುಕ್ತ ಒಡಿಶಾ ಸರ್ಕಾರ ಉದ್ಯೋಗಿಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ರಾಜ್ಯ ಸರ್ಕಾರಿ ಕಚೇರಿಗಳು, ಕಂದಾಯ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಜನವರಿ 22ರಂದು ಮಧ್ಯಾಹ್ನ 2.30ರ ವರೆಗೆ ಅರ್ಧ ದಿನ ಮುಚ್ಚಲ್ಪಡುತ್ತವೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಮೊದಲು ಜನವರಿ 22ರಂದು ಕೇಂದ್ರವು ತನ್ನ ಎಲ್ಲ ಉದ್ಯೋಗಿಗಳಿಗೆ ಅರ್ಧ ದಿನ ರಜೆ ಘೋಷಿಸಿತ್ತು. ಅಲ್ಲದೆ ಬ್ಯಾಂಕ್‌, ವಿಮಾ ಕಚೇರಿಗಳೂ ಅರ್ಧ ದಿನ ಬಂದ್‌ ಆಗಿರಲಿವೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಕೂಡ ರಜೆ ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version