Site icon Vistara News

Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್‌ ಸಿಟಿʼ ನಿಮಗಾಗಿಯೇ ಇದೆ!

tent city ayodhya

ಲಖನೌ: ಜನವರಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಉದ್ಘಾಟಿಸಲಿರುವ ಅಯೋಧ್ಯೆಯ ಶ್ರೀರಾಮ ದೇವಾಲಯಕ್ಕೆ (Ayodhya Ram Mandir) ಆಗ ಭೇಟಿ ನೀಡಲು ನೀವು ಯೋಜಿಸುತ್ತಿದ್ದರೆ, ದೇವಾಲಯದಿಂದ ಕಾಲ್ನಡಿಗೆಯ ದೂರದಲ್ಲಿ ಇರುವ ಐಷಾರಾಮಿ ʻಟೆಂಟ್ ಸಿಟಿ’ಯಲ್ಲಿ (Ayodhya tent city) ಉಳಿಯಲು ಪ್ಲಾನ್‌ ಮಾಡಬಹುದು.

ರಾಮ ಜನ್ಮಭೂಮಿಯಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿರುವ ‘ಟೆಂಟ್ ಸಿಟಿ’, ದೇಗುಲ ನಗರದ ವಿಹಂಗಮ ನೋಟವನ್ನು ನೀಡುತ್ತದೆ. ಇದಕ್ಕಾಗಿ ಪರಿಕ್ರಮ ಮಾರ್ಗದ ಉದ್ದಕ್ಕೂ ಇರುವ 20 ಎಕರೆ ಭೂಮಿಯನ್ನು ಮೀಸಲಿಡಲಾಗುತ್ತಿದೆ. ವಿವಿಧ ರೀತಿಯ ವಿನ್ಯಾಸದ 300 ಐಷಾರಾಮಿ ಡೇರೆಗಳನ್ನು ಹೊಂದಿರುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

“ಉದ್ದೇಶಿತ ಟೆಂಟ್‌ ಸಿಟಿಯು ಹೆದ್ದಾರಿಯಿಂದ ಪರಿಕ್ರಮ ಮಾರ್ಗಕ್ಕೆ ನೇರ ಪ್ರವೇಶವನ್ನು ಹೊಂದಿದೆ. ಅದರ ಸುತ್ತಲಿನ ಸಂಪೂರ್ಣ ಪ್ರದೇಶವನ್ನು ಇತರ ಯೋಜನೆಗಳೊಂದಿಗೆ ಪ್ರಾಯೋಗಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದು ರಾಮಜನ್ಮಭೂಮಿ ದೇವಸ್ಥಾನದ ಉತ್ತಮ ನೋಟವನ್ನು ಒದಗಿಸುತ್ತದೆ” ಎಂದು ಯೋಗಿ ಸರ್ಕಾರ ತಿಳಿಸಿದೆ.

ಜನವರಿಯಲ್ಲಿ ದೇವಾಲಯ ಉದ್ಘಾಟನೆಗೊಂಡ ನಂತರ ಪ್ರತಿದಿನ ಸುಮಾರು 1.5 ಲಕ್ಷ ಜನರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಯೋಧ್ಯೆಯು ಇಲ್ಲಿಯವರೆಗೆ ಸೀಮಿತ ಸಂಖ್ಯೆಯ ಹೋಟೆಲ್‌ಗಳನ್ನು ಹೊಂದಿದೆ ಮತ್ತು ʻಟೆಂಟ್ ಸಿಟಿ’ ಪ್ರವಾಸಿಗರಿಗೆ ಪರ್ಯಾಯವಾಗಿ ದೊರೆಯಲಿದೆ. ಖಾಸಗಿ ಬಿಡ್‌ದಾರರರಿಗೆ ಪರವಾನಗಿ ಆಧಾರದ ಮೇಲೆ ಐದು ವರ್ಷ ಟೆಂಟ್ ಸಿಟಿಯನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ನೀಡಲಾಗುತ್ತದೆ. ಟೆಂಟ್ ಸಿಟಿಯನ್ನು 20 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಒಂದು ವರ್ಷದಲ್ಲಿ ಕನಿಷ್ಠ 300 ಟೆಂಟ್‌ಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಪ್ರಸ್ತಾವಿತ ಟೆಂಟ್ ಸಿಟಿಯು ಪ್ರವಾಸಿಗರಿಗೆ ವಿಶಿಷ್ಟವಾದ ಮತ್ತು ಆರಾಮದಾಯಕವಾದ ಕ್ಯಾಂಪಿಂಗ್ ಅನುಭವವನ್ನು ಒದಗಿಸಲಿದೆ. ಪ್ರಾಕೃತಿಕ ಪರಿಸರ ಮತ್ತು ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಂರಕ್ಷಿಸುವ ಮೂಲಕ ಆಧುನಿಕ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಯೋಜನೆಯು ಹೊಂದಿದೆ. ಟೆಂಟ್‌ಗಳು ವಿಲ್ಲಾ, ಡಿಲಕ್ಸ್ ಮತ್ತು ಸೂಪರ್ ಡೀಲಕ್ಸ್ ಟೆಂಟ್‌ಗಳನ್ನು ಒಳಗೊಂಡಂತೆ ವಿವಿಧ ವರ್ಗಗಳಲ್ಲಿದೆ. ಸೇವೆಯ ಗುಣಮಟ್ಟ 4 ಮತ್ತು 5 ಸ್ಟಾರ್ ವರ್ಗದ ಹೋಟೆಲ್‌ಗಳಂತಿರುತ್ತದೆ.

ಇದನ್ನೂ ಓದಿ: ಅಯೋಧ್ಯಾ ರಾಮಮಂದಿರಕ್ಕೆ 2024ರ ಜನವರಿಯಿಂದ ಭಕ್ತರಿಗೆ ಪ್ರವೇಶ; ಸಂಕ್ರಾಂತಿಯಂದೇ ರಾಮಲಲ್ಲಾ ಪ್ರತಿಷ್ಠಾಪನೆ

Exit mobile version