ನವದೆಹಲಿ: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಸಾಧುಗಳ ಮೇಲೆ ನಡೆದ ಹಲ್ಲೆಯನ್ನು (Sadhus Assaulted) ಖಂಡಿಸಿದ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಅವರನ್ನು ಮುಮ್ತಾಜ್ ಖಾನ್ ಎಂದು ಕರೆದಿದ್ದಾರೆ!
ರಾಜ್ಯದಲ್ಲಿ ಧಾರ್ಮಿಕ ಮೆರವಣಿಗೆಗಳ ಮೇಲೆ ಈ ಹಿಂದೆ ನಡೆದ ದಾಳಿಗಳ ಬಗ್ಗೆಯೂ ಗಮನ ಸೆಳೆದಿರುವ ಸತ್ಯೇಂದ್ರ ದಾಸ್ ಅವರು ಮಮತಾ ಬ್ಯಾನರ್ಜಿ ಕೇಸರಿ ಬಣ್ಣವನ್ನು (Bhagwa colour) ನೋಡಿದಾಗ ಕೋಪಗೊಳ್ಳುತ್ತಾರೆ ಎಂದು ಆರೋಪಿಸಿದರು.
”ರಾಮ ನವಮಿ ಮತ್ತು ಇತರ ಧಾರ್ಮಿಕ ಮೆರವಣಿಗೆಗಳ ಮೇಲೆ ಈ ಹಿಂದೆ ನಡೆದ ದಾಳಿಯನ್ನು ಗಮನಿಸಿ ಯಾರೋ ಮಮತಾ ಬ್ಯಾನರ್ಜಿಗೆ ಮುಮ್ತಾಜ್ ಖಾನ್ ಎಂಬ ಹೆಸರನ್ನು ನೀಡಿದ್ದರು. ಅದು ಸರಿಯಾಗಿದೆ” ಎಂದು ಅವರು ಹೇಳಿದರು. ”ಮಮತಾ ಬ್ಯಾನರ್ಜಿ ಕೇಸರಿ ಬಣ್ಣವನ್ನು ನೋಡಿದಾಗ ಕೋಪಗೊಳ್ಳುತ್ತಾರೆ ಮತ್ತು ಅದಕ್ಕಾಗಿಯೇ ಅವರು ಈ ದಾಳಿಗಳನ್ನು ಮಾಡಿಸುತ್ತಾರೆ. ಈ ದಾಳಿಯ ಘಟನೆಗಳು ಖಂಡನೀಯ” ಎಂದು ಅವರು ತಿಳಿಸಿದರು.
#WATCH | Madhur Goswami, a sadhu who claims he was assaulted by a mob in West Bengal's Purulia, says, "While we were on our way to Gangasagar, suddenly our car was stopped by a large mob which assaulted us." pic.twitter.com/byg2fFXAhK
— ANI (@ANI) January 13, 2024
ಪುರುಲಿಯಾ ಜಿಲ್ಲೆಯಲ್ಲಿ ಸಾಧುಗಳ ಗುಂಪನ್ನು ಕೆಲವರು ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ದಾಳಿಕೋರರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ಅಪರಾಧಿಗಳು ಎಂದು ಬಿಜೆಪಿ ಐಟಿ ಸೆಲ್ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
“ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ, ಶಹಜಹಾನ್ ಶೇಖ್ ಅವರಂತಹ ಭಯೋತ್ಪಾದಕರಿಗೆ ರಕ್ಷಣೆ ಸಿಗುತ್ತದೆ ಮತ್ತು ಸಾಧುಗಳನ್ನು ಥಳಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹಿಂದೂ ಆಗಿರುವುದೇ ದೊಡ್ಡ ಅಪರಾಧ ಎಂಬಂತಾಗಿದೆʼʼ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಏನಿದು ಘಟನೆ?
ಮಕ್ಕಳ ಕಳ್ಳರೆಂದು ಭಾವಿಸಿ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಮೂವರು ಸಾಧುಗಳ ಮೇಲೆ ಗುಂಪುಗೂಡಿ ಹಲ್ಲೆ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ವಿವಸ್ತ್ರಗೊಳಿಸಿ ಥಳಿಸಿದೆ. ಘಟನೆಯ ವಿಡಿಯೋ ಶುಕ್ರವಾರ ಹೊರಬಿದ್ದು ವೈರಲ್ ಆಗಿತ್ತು. ಮೂರು ಸಾಧುಗಳು – ಒಬ್ಬ ವ್ಯಕ್ತಿ ಮತ್ತು ಅವರ ಇಬ್ಬರು ಪುತ್ರರು – ಉತ್ತರ ಪ್ರದೇಶದಿಂದ ಬಂದವರಾಗಿದ್ದು, ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಗಂಗಾಸಾಗರ್ ತಲುಪಲು ಗುರುವಾರ ವಾಹನವನ್ನು ಬಾಡಿಗೆಗೆ ಪಡೆದಿದ್ದರು. ಈ ಸಾಧುಗಳು ದಾರಿ ತಪ್ಪಿದ್ದರು ಮತ್ತು ದಾರಿಯಲ್ಲಿ ಕಂಡ ಇಬ್ಬರು ಹುಡುಗಿಯರ ಬಳಿ ಮಾರ್ಗವನ್ನು ಕೇಳಿದರು. ಆಗ ಹುಡುಗಿಯರು ಹೆದರಿ ಓಡಿಹೋಗಿದ್ದರು. ಸಾಧುಗಳು ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆಕ್ರೋಶಗೊಂಡ ಸ್ಥಳೀಯರು ಗುಂಪು ಸೇರಿ ಸಾಧುಗಳಿಗೆ ಥಳಿಸಿದ್ದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಸಾಧುಗಳನ್ನು ರಕ್ಷಿಸಿದ್ದರು. ಪುರುಲಿಯಾ ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಬ್ಯಾನರ್ಜಿ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಟಿಎಂಸಿ ಸರ್ಕಾರದ ನಡೆಯನ್ನು ಖಂಡಿಸಿದೆ.